ದರ ಏರಿಕೆ ನಿರೀಕ್ಷೆಯಲ್ಲೇ ಖಾಸಗಿ ಪಶು ಆಹಾರದ ದರ ಪ್ರತಿ ಚೀಲಕ್ಕೆ ೨೦೦ ರಿಂದ ೩೦೦ ರು. ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪಶು ಆಹಾರ ಬೆಲೆ ನಿಯಂತ್ರಿಸಿ । ವಿಶೇಷ ತನಿಖಾ, ನಿಯಂತ್ರಣ ತಂಡ ರಚಿಸಿ: ನಾರಾಯಣಗೌಡ ಆಗ್ರಹ

ಕನ್ನಡಪ್ರಭ ವಾರ್ತೆ ಕೋಲಾರ

ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಪ್ರತಿ ಲೀಟರ್ ಹಾಲಿಗೆ ೮ ರು. ಹೆಚ್ಚಿಸುವುದರ ಜೊತೆಗೆ ಸರ್ಕಾರ ಘೋಷಿಸಿರುವ ಪ್ರೋತ್ಸಾಹಧನವನ್ನು ಪ್ರತಿ ತಿಂಗಳು ರೈತರ ಖಾತೆಗೆ ಬಿಡುಗಡೆ ಮಾಡಬೇಕು. ಖಾಸಗಿ ಪಶು ಆಹಾರ ಮಾರಾಟಗಾರರ ಮನಬಂದಂತೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ವಿಶೇಷ ತನಿಖಾ ಮತ್ತು ನಿಯಂತ್ರಣ ತಂಡ ರಚಿಸಬೇಕು. ಇಲ್ಲದಿದ್ದರೆ ದರ ಏರಿಕೆಯ ಲಾಭ ಖಾಸಗಿಯವರ ಜೇಬು ಸೇರುತ್ತದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರ ಮತ್ತು ಹಾಲು ಒಕ್ಕೂಟವನ್ನು ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು, ದರ ಏರಿಕೆ ನಿರೀಕ್ಷೆಯಲ್ಲೇ ಖಾಸಗಿ ಪಶು ಆಹಾರದ ದರ ಪ್ರತಿ ಚೀಲಕ್ಕೆ ೨೦೦ ರಿಂದ ೩೦೦ ರು. ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.ಖಾಸಗಿ ಮಾರುಕಟ್ಟೆಯಲ್ಲಿ ರವೆ ಬೂಸ ೧೫೦೦-೧೬೦೦ ರು., ಒಟ್ಟು ಬೂಸ ೧೩೦೦-೧೪೦೦ ರು., ಕಳ್ಳೆ ಒಟ್ಟು ೭೦೦ ರು., ಹಿಂಡಿ ೧೬೫೦-೧೭೦೦ ರು.ಗೆ ಏರಿಕೆಯಾಗಿದೆ. ಇದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಹೆಚ್ಚಿದೆ. ಪ್ರಶ್ನಿಸಿದರೆ ಒಕ್ಕೂಟದ ಅಧಿಕಾರಿಗಳು ಪಶು ಇಲಾಖೆ ಕಡೆ, ಪಶು ಇಲಾಖೆಯವರು ಒಕ್ಕೂಟದ ಕಡೆ ಬೆರಳು ತೋರಿಸುತ್ತಿದ್ದಾರೆ. ಇದು ವಿಷಾದನೀಯ ಎಂದರು.

ಒಂದು ಲೀಟರ್ ಹಾಲು ಉತ್ಪಾದನೆಗೆ ೪೨ ರು. ವೆಚ್ಚವಾಗುತ್ತಿದೆ. ಹಸಿರು ಮೇವು, ಒಣ ಮೇವು, ಪಶು ಆಹಾರ, ಹಸು ನಿರ್ವಹಣೆ, ಕಾರ್ಮಿಕ ವೆಚ್ಚ ಸೇರಿಸಿದರೆ ಮಾರಾಟದ ಹಣದಲ್ಲಿ ವೆಚ್ಚ ಸರಿದೂಗುವುದೇ ಕಷ್ಟ. ರೈತರು ಕೈಯಿಂದ ಹಣ ಹಾಕಿ ಹೈನುಗಾರಿಕೆ ಮಾಡುವಂತಾಗಿದೆ. ಉಳಿಯುವುದು ಸಗಣಿ, ಗಂಜಲ ಮಾತ್ರ ಎಂದರು.ಪ್ರಸ್ತುತ ೩.೫ ಫ್ಯಾಟ್ ಮತ್ತು ೮.೫ ಎಸ್‌ಎನ್‌ಎಫ್‌ಗೆ ೩೪.೬೫ ರು., ೩.೬ ಫ್ಯಾಟ್‌ಗೆ ೩೪.೪೦ ರು. ದರ ಸಿಗುತ್ತಿದೆ. ೮ ರು. ಏರಿಕೆ ಮತ್ತು ೫ ರು. ಪ್ರೋತ್ಸಾಹಧನ ಸೇರಿಸಿದರೆ ೪೭.೧೫ ರು. ಸಿಗಬೇಕು. ಆದರೆ ಒಕ್ಕೂಟ ಅಭಿವೃದ್ಧಿ ಹೆಸರಲ್ಲಿ ೧ ರು. ಕಡಿತ ಮಾಡುತ್ತಿದೆ. ಏರಿಕೆಯ ಲಾಭವನ್ನು ಖಾಸಗಿ ಕಂಪನಿಗಳು ಕಬಳಿಸುತ್ತಿವೆ ಎಂದು ಆರೋಪಿಸಿದರು.

ಯುವ ರೈತ ಮುಖಂಡ ಯಾರಂಘಟ್ಟ ಗಿರೀಶ್ ಮಾತನಾಡಿ, ರೈತರು ಬೆಳಿಗ್ಗೆಯಿಂದ ಸಂಜೆಯವರೆಗೆ ಹಸು ಆರೈಕೆ, ಮೇವು, ಹಾಲು ಕರೆಯುವಿಕೆಯಲ್ಲಿ ಶ್ರಮಿಸುತ್ತಾರೆ. ಹಾಲಿನ ಉತ್ಪನ್ನ, ಕುಡಿಯುವ ನೀರಿನ ಬಾಟಲಿಗೂ ಬೆಲೆ ಇದೆ. ಆದರೆ ರೈತರ ಬೆವರಿನ ಹಾಲಿಗೆ ನ್ಯಾಯಯುತ ಬೆಲೆ ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ ಇದ್ದರು.