ಸಾರಾಂಶ
ಮಹದಾಯಿ ಹೋರಾಟ ವೇದಿಕೆಯಲ್ಲಿ ವೀರಭಸಪ್ಪ ಹೂಗಾರ ಆಗ್ರಹ
ನರಗುಂದ: ರೈತರು ಕೃಷಿಗಾಗಿ ಪಡೆದ ಸಾಲವನ್ನು ಮನ್ನಾ ಮಾಡಲು ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮಹದಾಯಿ ಸಮನ್ವಯ ಸಮಿತಿ ಅಧ್ಯಕ್ಷ ವೀರಭಸಪ್ಪ ಹೂಗಾರ ಆಗ್ರಹಿಸಿದರು.ಅವರು 3073ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ನಾಯಕರು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂದು ಹೋರಾಟ ಹಮ್ಮಿಕೊಂಡಿರುವುದು ಸ್ವಾಗತಾರ್ಹ, ರಾಜ್ಯದ ರೈತರು ಹಿಂದಿನ ಮೂರು ವರ್ಷ ಅತೀವೃಷ್ಟಿಯಿಂದ ಸಾಕಷ್ಟು ತೊಂದರೆಯಲ್ಲಿದ್ದಾರೆ. ಈ ವರ್ಷ ಅನಾವೃಷ್ಟಿಯಿಂದ ರೈತ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ಹಾನಿ ಮಾಡಿಕೊಂಡು ಮಾನವ ಕುಲಕ್ಕೆ ಅನ್ನ ಹಾಕುವ ಅನ್ನದಾತರು ಇಂದು ಬಹಳ ತೊಂದರೆಯಲ್ಲಿದ್ದಾರೆ. ಆದ್ದರಿಂದ ರಾಜ್ಯ ಬಿಜೆಪಿ ಕೇವಲ ರಾಜ್ಯ ಸರ್ಕಾರಕ್ಕೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಹೋರಾಟ ಮಾಡಿದರೆ ಸಾಲದು, ರೈತರು ಕೃಷಿಗಾಗಿ ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಸಾಲ ಪಡೆದಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಕೃಷಿ ಸಾಲ ಮನ್ನಾ ಮಾಡಿದರೆ ಮಾತ್ರ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಬಿಜೆಪಿ ನಾಯಕರ ಹೋರಾಟಕ್ಕೆ ರಾಜ್ಯದ ರೈತರು ಸಂರ್ಪೂಣ ಬೆಂಬಲ ನೀಡುತ್ತೇವೆ. ಹಾಗಾಗಿ ಮುಂದಿನ ದಿನಗಳಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಕೇಂದ್ರ ಸರ್ಕಾರ ಆಗ್ರಹ ಮಾಡಬೇಕೆಂದು ಬಿಜೆಪಿ ನಾಯಕರಿಗೆ ಮನವಿ ಮಾಡಿಕೊಂಡರು. ರೈತ ಮುಖಂಡ ಸಿ.ಎಸ್. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಬೆಳಗಾವಿಯಲ್ಲಿ ಅಧಿವೇಶನ ನಡೆದ ಮಾತ್ರ ಈ ಭಾಗದ ರೈತರ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಬಗ್ಗೆ ಚರ್ಚೆ ಮಾಡಿದರೆ ಸಾಲದು. ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷಗಳು ಒಂದಾಗಿ ಸರ್ವ ಪಕ್ಷ ಸಭೆ ಕರೆದು ಮಹದಾಯಿ ಯೋಜನೆ ಜಾರಿ ಮಾಡಲು ನಿರ್ಣಯ ತೆಗೆದುಕೊಂಡು ಪ್ರಧಾನಿಗಳಾದ ನರೇಂದ್ರ ಮೋದಿಯವರ ಕಡೆ ನಿಯೋಗ ತೆಗೆದುಕೊಂಡು ಹೋಗಿ ಈ ಯೋಜನೆ ಜಾರಿ ಮಾಡಲು ಮುಂದಾಗಬೇಕೆಂದು ಆಗ್ರಹಿಸಿದರು. ರೈತ ಮುಖಂಡರಾದ ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಮಲ್ಲೇಶ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ವಿಜಯಕುಮಾರ ಹೂಗಾರ, ವಾಸು ಚವಾಣ, ಶಂಕ್ರಪ್ಪ ಜಾಧವ, ಯಲ್ಲಪ್ಪ ಚಲವಣ್ಣವರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.