ಸಾರಾಂಶ
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಚುನಾವಣಾ ಖರ್ಚು ವೆಚ್ಚಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಚುನಾವಣಾ ಖರ್ಚು ವೆಚ್ಚಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ಲೋಕಸಭಾ ಚುನಾವಣೆ-2024ರ ಚುನಾವಣಾ ವೆಚ್ಚ ಪರಿಶೀಲನೆ ಕುರಿತು ಅಭ್ಯರ್ಥಿಗಳು ಹಾಗೂ ಏಜೆಂಟರೊಂದಿಗೆ ಜಿಲ್ಲಾ ಪಂಚಾಯಿತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಸಂಪೂರ್ಣ ವಿವರಣೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ ಅಭ್ಯರ್ಥಿಗಳ ಚುನಾವಣೆ ವೆಚ್ಚದ ಲೆಕ್ಕ ಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರು ಪರಿಶೀಲನೆ ಮಾಡಲಿದ್ದಾರೆ. ಅಭ್ಯರ್ಥಿಗಳು ಚುನಾವಣಾ ವೆಚ್ಚ ನಿರ್ವಹಣೆಗಾಗಿ ಕೈಗೊಂಡ ಹೊಸ ಬ್ಯಾಂಕ್ ಖಾತೆ ಹಾಗೂ ರಿಜಿಸ್ಟರ್ ನಿರ್ವಹಣೆ ವಿವರವನ್ನು ಪರಿಶೀಲಿಸಿಕೊಳ್ಳಬೇಕು. ವರದಿಯಲ್ಲಿನ ಮಾಹಿತಿಯು ಸರಿಯಾಗಿ ನಮೂದಿಸಬೇಕು. ಅಭ್ಯರ್ಥಿಗಳು ನಿರ್ವಹಿಸುವ ರಿಜಿಸ್ಟರ್ ಹಾಗೂ ಚುನಾವಣಾ ಅಧಿಕಾರಿಗಳಲ್ಲಿರುವ ಶ್ಯಾಡೋ ಅಬ್ರ‍್ವೆಶನ್ ರಿಜಿಸ್ಟರ್‌ನಲ್ಲಿ ಯಾವುದೇ ವ್ಯತ್ಯಾಸವಿರಬಾರದು ಎಂದು ಹೇಳಿದರು.ಚುನಾವಣಾ ಖರ್ಚು-ವೆಚ್ಚಗಳ ಲೆಕ್ಕಪತ್ರಗಳ ಪರಿಶೀಲನಾ ಸಭೆಗೆ ಅಭ್ಯರ್ಥಿಗಳು ಮತ್ತು ಚುನಾವಣಾ ವೆಚ್ಚಗಳಿಗಾಗಿ ನೇಮಿಸಿರುವ ಅಭ್ಯರ್ಥಿಯ ಏಜೆಂಟರು ಖುದ್ದಾಗಿ ಹಾಜರಾಗಬೇಕು. ಅಭ್ಯರ್ಥಿಗಳಲ್ಲಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅವುಗಳನ್ನು ಚುನಾವಣಾ ವೆಚ್ಚ ವೀಕ್ಷಕರ ಮುಂದೆ ಸಲ್ಲಿಸಲು ಅವಕಾಶವಿರುತ್ತದೆ ಎಂದರು.
ಅಭ್ಯರ್ಥಿಗಳ ಚುನಾವಣಾ ಖರ್ಚು-ವೆಚ್ಚಗಳ ನೋಡಲ್ ಅಧಿಕಾರಿ ಪ್ರಶಾಂತ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಆರ್.ಪಿ ಆ್ಯಕ್ಟ್ 77 ಸೆಕ್ಷನ್ ಪ್ರಕಾರ ನಿಗದಿತ ನಮೂನೆಯಲ್ಲಿ ಚುನಾವಣೆ ವೆಚ್ಚವನ್ನು ನಿರ್ವಹಣೆ ಮಾಡಬೇಕು. ಚುನಾವಣಾ ಫಲಿತಾಂಶದ ಬಳಿಕ 30 ದಿನಗಳೊಳಗಾಗಿ ಚುನಾವಣೆ ವೆಚ್ಚದ ವಿವರ ಸಲ್ಲಿಸಬೇಕು. ಅಭ್ಯರ್ಥಿಗಳು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ವಿವರಗಳನ್ನು ಪಾರ್ಟ್-ಎ (ಡೇ ಟು ಡೇ ರಿಜಿಸ್ಟರ್), ಪಾರ್ಟ್-ಬಿ (ಕ್ಯಾಶ್ ರಿಜಿಸ್ಟರ್), ಪಾರ್ಟ್-ಸಿ (ಬ್ಯಾಂಕ್ ರಿಜಿಸ್ಟರ್) ವಿವರವನ್ನು ಮತ್ತು ಇದರ ಜೊತೆಗೆ ಪಾರ್ಟ್ 1ರಿಂದ 4 ಹಾಗೂ ಶೆಡ್ಯುಲ್ಡ್ 1ರಿಂದ 12ರಲ್ಲಿ ಸಲ್ಲಿಸಬೇಕು. ಆರ್.ಪಿ ಆ್ಯಕ್ಟ್ ಸೆಕ್ಷನ್ 10(ಎ) ಪ್ರಕಾರ ಅಭ್ಯರ್ಥಿಗಳು ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸದಿದ್ದಲ್ಲಿ ಚುನಾವಣಾ ಆಯೋಗವು ಅಂತಹ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಕಾಲ ಅನರ್ಹಗೊಳಿಸಲಿದೆ. ಕೊಪ್ಪಳ ಕ್ಷೇತ್ರಕ್ಕೆ ಸ್ಪರ್ಧಿಸಿದ ಎಲ್ಲ 19 ಅಭ್ಯರ್ಥಿಗಳು ಚುನಾವಣಾ ವೆಚ್ಚ ವಿವರ ಸಲ್ಲಿಸಬೇಕು ಎಂದು ವಿವರವಾಗಿ ತರಬೇತಿ ನೀಡಿದರು.ಜೂ. 30ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಚುನಾವಣಾ ವೆಚ್ಚ ವೀಕ್ಷಕರ ಉಪಸ್ಥಿತಿಯಲ್ಲಿ ನಡೆಯುವ ರಿಕನ್ಸಿಲೇಶನ್ ಸಭೆಯಲ್ಲಿ ಎಲ್ಲ ಅಭ್ಯರ್ಥಿಗಳು ಚುನಾವಣೆ ವೆಚ್ಚದ ವಿವರ ಸಲ್ಲಿಸಲು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತರಬೇತಿ ಕಾರ್ಯಕ್ರಮದ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಚುನಾವಣಾ ಶಾಖೆಯ ತಹಸೀಲ್ದಾರ ರವಿ ವಸ್ತ್ರದ್ ಸೇರಿದಂತೆ ಮತ್ತಿತರರಿದ್ದರು.