ಬಂಜಾರರ ಜಾತಿ ಗಣತಿ ಸರಿಯಾಗಿ ಆಗಲಿ: ಪಿ.ಟಿ. ಪರಮೇಶ್ವರ ನಾಯ್ಕ

| Published : Jul 21 2025, 01:30 AM IST

ಸಾರಾಂಶ

ಬಂಜಾರರು ಈ ರಾಜ್ಯದಲ್ಲಿ 37ರಿಂದ 40 ಲಕ್ಷ ಜನಸಂಖ್ಯೆ ಹೊಂದಿದ್ದಾರೆ. ಆದರೆ, ಹಿಂದುಳಿದ ವರ್ಗಗಳ ಆಯೋಗದ ಗಣತಿಯಲ್ಲಿ ಬರೀ 9 ಲಕ್ಷ ಜನಸಂಖ್ಯೆ ತೋರಿಸಿದ್ದಾರೆ.

ಬಂಜಾರ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕನ್ನಡಪ್ರಭ ವಾರ್ತೆ ಹೊಸಪೇಟೆ

ಬಂಜಾರರು ಈ ರಾಜ್ಯದಲ್ಲಿ 37ರಿಂದ 40 ಲಕ್ಷ ಜನಸಂಖ್ಯೆ ಹೊಂದಿದ್ದಾರೆ. ಆದರೆ, ಹಿಂದುಳಿದ ವರ್ಗಗಳ ಆಯೋಗದ ಗಣತಿಯಲ್ಲಿ ಬರೀ 9 ಲಕ್ಷ ಜನಸಂಖ್ಯೆ ತೋರಿಸಿದ್ದಾರೆ. ಈ ಗಣತಿ ಬಂಜಾರರಿಗೆ ಮರಣ ಶಾಸನ ಆಗುತ್ತಿತ್ತು. ಎಐಸಿಸಿ ನಾಯಕ ರಾಹುಲ್‌ ಗಾಂಧಿ ಅವರು ಈ ಗಣತಿ ತಿರಸ್ಕರಿಸಲು ತಿಳಿಸಿದ್ದಾರೆ. ಈಗ ನ್ಯಾ. ನಾಗ ಮೋಹನ್‌ ದಾಸ್‌ ಆಯೋಗದ ಗಣತಿಯಲ್ಲಿ ಎಲ್ಲರೂ ಸರಿಯಾಗಿ ಜಾತಿ ಗಣತಿ ಮಾಡಿಸಬೇಕು ಎಂದು ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ನಡೆದ ಬಂಜಾರ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಂಬಾಣಿ ಸಮಾಜದವರು ರಾಜ್ಯದಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ. ತಾಂಡಾ ಅಭಿವೃದ್ಧಿ ನಿಗಮ ಹಾಗೂ ಸಮಾಜದ ಪ್ರಕಾರ 37ರಿಂದ 40 ಲಕ್ಷ ಜನಸಂಖ್ಯೆ ಇದ್ದಾರೆ. ನಮಗೆ ಒಳ ಮೀಸಲಾತಿಯಲ್ಲಿ ಹೆಚ್ಚಿನ ಪಾಲು ಬರಬೇಕಾದರೆ, ರಾಜ್ಯದಲ್ಲಿರುವ 3900 ತಾಂಡಾಗಳಲ್ಲೂ ಸರಿಯಾಗಿ ಜಾತಿ ಗಣತಿ ನಮೂದಿಸಬೇಕು. ನಗರಗಳಲ್ಲಿರುವವರು ಕೂಡ ಯಾವುದೇ ಹಿಂಜರಿಕೆ ಇಲ್ಲದೇ ಜಾತಿ ನಮೂದಿಸಬೇಕು. ಹಿಂದುಳಿದ ವರ್ಗದ ಆಯೋಗದಿಂದಲೂ ಮರು ಸರ್ವೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಅನುಮೋದಿಸಿದ್ದಾರೆ. ಆಗ ನಾವು ತಾಂಡಾಗಳಿಗೆ ಹಾಗೂ ನಗರ, ಪಟ್ಟಣ ಪ್ರದೇಶಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಸಮಾಜದ ರಾಜಕಾರಣಿಗಳು, ಬಂಜಾರ ಮಠಾಧೀಶರು ಕೂಡ ಜಾತಿ ಗಣತಿ ಕುರಿತು ಜಾಗೃತಿ ಮೂಡಿಸಬೇಕು. ಸಮಾಜದವರು ಜಾಗೃತರಾಗಬೇಕು ಎಂದರು.

ಬಂಜಾರ ಸಮಾಜದವರಿಗೆ ಕಲೆ, ಸಾಹಿತ್ಯ, ಸಂಗೀತ ರಕ್ತಗತವಾಗಿದೆ. ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿದೆ. ನಾವು ಜಾನಪದ ಗೀತೆಗಳನ್ನು ಹಾಡುತ್ತಾ, ಕುಣಿಯೋದು ನಮ್ಮ ಸಂಪ್ರದಾಯ, ಸಂಸ್ಕೃತಿ ಆಗಿದೆ. ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಬೆಲೆ ನೀಡುತ್ತೇವೆ. ಕಲೆಯೇ ಬಂಜಾರರ ಜೀವಾಳ ಆಗಿದೆ ಎಂದರು.

ಬಂಜಾರ ಸಮಾಜದಲ್ಲಿ ಸಾಹಿತಿಗಳು, ಸಾಹಿತ್ಯ ಅಭಿಮಾನಿಗಳು, ಸಾಹಿತ್ಯಾಸಕ್ತರು ಇದ್ದಾರೆ. ಶ್ರೀಮಂತ ಕಲೆ, ಸಂಸ್ಕೃತಿ ಬಂಜಾರ ಸಮಾಜದಲ್ಲಿದೆ. ಕಸೂತಿ ಕಲೆ ನಮ್ಮ ಬದುಕಿನ ಭಾಗ ಆಗಿದೆ. ಉತ್ತಮ ಸಂಸ್ಕೃತಿ ಹೊಂದಿರುವ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ನಮ್ಮಲ್ಲಿ ತಾಳ್ಮೆ, ಸಹನೆ ಮಾಯವಾಗಿದೆ. ನಾಯಕತ್ವ ಗುಣ ನಮ್ಮಲ್ಲಿದೆ. ಆದರೆ, ನಮ್ಮಲ್ಲಿ ಅಸೂಯೆ ಇತ್ತೀಚೆಗೆ ಹುಟ್ಟಿಕೊಳ್ಳುತ್ತಿದೆ. ಇದು ಸಮಾಜಕ್ಕೆ ಅಪಾಯಕಾರಿ ಆಗಲಿದೆ. ಸಮಾಜವನ್ನು ಸಂಘಟಿಸುವ ಶಕ್ತಿ ನಮ್ಮಲ್ಲಿದೆ. ಎಲ್ಲ ಸಮಾಜಗಳ ಜೊತೆಗೆ ಸಮನ್ವಯದಿಂದ ಹೋಗುವ ಗುಣ ನಮ್ಮಲ್ಲಿದೆ. ಆದರೆ, ಪರಸ್ಪರ ಅಸೂಯೆ ಮನೋಭಾವದಿಂದ ನಾವು ಅಧೋಗತಿಗೆ ತೆರಳುತ್ತಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಸೂಚ್ಯವಾಗಿ ಹೇಳಿದರು.

ಬಂಜಾರ ಗುರುಪೀಠದ ಶ್ರೀ ಶಿವಪ್ರಕಾಶ ಮಹಾರಾಜ್‌ ಸ್ವಾಮೀಜಿ, ಶ್ರೀ ತಿಪ್ಪೇಸ್ವಾಮಿ ಮಹಾರಾಜ್‌ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖಂಡರಾದ ಆರ್‌.ಬಿ. ನಾಯ್ಕ, ಡಾ. ಉತ್ತಮ್‌ ಮೂಡ್‌ ನಾಯ್ಕ, ಶ್ರೀಕಾಂತ್‌ ಆರ್‌. ಜಾಧವ್‌, ರಾಧಾಕೃಷ್ಣ ನಾಯ್ಕ, ಛತ್ರಪ್ಪ, ನರಸಿಂಗ, ಹಾಲ್ಯಾ ನಾಯ್ಕ, ಡಾ. ಎಲ್‌.ಪಿ. ಕಠಾರಿ ನಾಯ್ಕ, ಖಂಡು ಬಂಜಾರ, ಕುಬೇರ್‌ ನಾಯ್ಕ, ಡಾ. ಮಿಟ್ಯ ನಾಯ್ಕ, ಲಕ್ಷ್ಮೀ ಬಾಯಿ, ಡಿ. ಲಾಲ್ಯಾ ನಾಯ್ಕ, ಕೃಷ್ಣ ಲಮಾಣಿ, ಶಿವಕುಮಾರ ನಾಯ್ಕ, ಗಜಾನನ ನಾಯ್ಕ, ಅಲೋಕ್‌ ನಾಯ್ಕ, ಡಾ. ಗೋಪಿ ನಾಯ್ಕ, ವಾಲ್ಯಾ ನಾಯ್ಕ, ಮಲ್ಲೇಶ ಲಮಾಣಿ, ರಾಮ್ಯಾ ನಾಯ್ಕ, ಡಿ.ಬಿ. ನಾಯ್ಕ, ಎಲ್‌.ಡಿ. ತಿಪ್ಪಾನಾಯ್ಕ, ಡಿ.ಜೆ. ನಿಂಗಾ ನಾಯ್ಕ, ವೆಂಕಟೇಶ ನಾಯ್ಕ, ರಾಮ ನಾಯ್ಕ, ಈಶ್ವರ ನಾಯ್ಕ ಮತ್ತಿತರರಿದ್ದರು. ಸರಿಗಮಪ ಖ್ಯಾತಿಯ ಗಾಯಕ ರಮೇಶ ಲಮಾಣಿ ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.