ಕನ್ನಡ ನಾಡು ಮಾತ್ರವಲ್ಲದೇ ವಿದೇಶದಲ್ಲಿರುವ ಕನ್ನಡಿಗರೂ ಕೂಡ ಕನ್ನಡ ಹಬ್ಬ ಆಚರಿಸುತ್ತಿದ್ದಾರೆ. 1905ರಲ್ಲಿ ಕನ್ನಡಕುಲ ಪುರೋಹಿತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣಕ್ಕೆ ಮುನ್ನುಡಿ ಬರೆದರು. ಅವರೊಟ್ಟಿಗೆ ಕುವೆಂಪು, ಬಿಎಂಶ್ರೀ ಸೇರಿದಂತೆ ಸಾವಿರಾರು ಮಂದಿ ಹೋರಾಟಕ್ಕೆ ನಿಲ್ಲುತ್ತಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಹಬ್ಬ ನವೆಂಬರ್ ತಿಂಗಳಲ್ಲಿ ಮಾತ್ರ ಆಚರಿಸಿದೆ ವರ್ಷವಿಡಿ ಕನ್ನಡ ಡಿಂಡಿಮ ಮೊಳಗಲಿ ಎಂದು ಕನ್ನಡ ಪರಿಚಾರಕ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.ನಗರದ ಸುಭಾಷ್ ನಗರದ ಶಿವನಂಜಪ್ಪ ಪಾರ್ಕ್ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಪ್ರತಿಭಾಂಜಲಿ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಕನ್ನಡವೇ ಸತ್ಯ-ಸಂಚಿಕೆ-8, 71ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಗಂಧದಗುಡಿ ಗೀತ ಸಂಜೆ, ಪ್ರತಿಭಾಂಜಲಿ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕನ್ನಡ ನಾಡು ಮಾತ್ರವಲ್ಲದೇ ವಿದೇಶದಲ್ಲಿರುವ ಕನ್ನಡಿಗರೂ ಕೂಡ ಕನ್ನಡ ಹಬ್ಬ ಆಚರಿಸುತ್ತಿದ್ದಾರೆ. 1905ರಲ್ಲಿ ಕನ್ನಡಕುಲ ಪುರೋಹಿತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣಕ್ಕೆ ಮುನ್ನುಡಿ ಬರೆದರು. ಅವರೊಟ್ಟಿಗೆ ಕುವೆಂಪು, ಬಿಎಂಶ್ರೀ ಸೇರಿದಂತೆ ಸಾವಿರಾರು ಮಂದಿ ಹೋರಾಟಕ್ಕೆ ನಿಲ್ಲುತ್ತಾರೆ ಎಂದು ನುಡಿದರು.
1956ರಲ್ಲಿ ಮೈಸೂರು ರಾಜ್ಯ ಉದಯವಾಯಿತು. 1973ರಲ್ಲಿ ಅಂದಿ ಮುಖ್ಯಮಂತ್ರಿ ದೇವರಾಜು ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು. ಈಗ ನಾಡಿಗೆ 71 ವರ್ಷಗಳು ಸಂದಿವೆ. ಕನ್ನಡ ಭಾಷೆ ಬೆಳೆವಣಿಗೆಗೆ ಕನ್ನಡ ಬಳಕೆಯಾಗಬೇಕಿದೆ ಎಂದರು.ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗಾಗಿ ಸಿದ್ಧಪಡಿಸಿದ ಸರೋಜಿನಿ ಮಹಿಷಿ ವರದಿಗೆ 40ವರ್ಷ ಕಳೆದಿದ್ದರೂ ಇನ್ನೂ ಜಾರಿಯಾಗಿಲ್ಲ. ಇದರಿಂದ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಇಲ್ಲದಂತಾಗಿದೆ. ನೆರೆ ಹೊರೆ ರಾಜ್ಯಗಳಿಂದ ಬಂದವರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜ್ಯ ಕರ್ನಾಟಕವಾಗಲು ಹಲವಾರು ಹೋರಾಟ ಕಂಡಿದೆ. ಕನ್ನಡ ಹಬ್ಬದಲ್ಲಿ ಎಲ್ಲಾ ಹಿರಿಯನ್ನು ನೆನೆಯಬೇಕು ಎಂದರು.ಪ್ರತಿಭಾಂಜಲಿ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಸುಜಾತಾ ಕೃಷ್ಣ ಮಾತನಾಡಿ, ಕನ್ನಡ ಭಾಷೆಯೊಂದಿಗೆ ಇತರ ಭಾಷೆಗಳ ಜ್ಞಾನ ಬೇಕಿದೆ. ವ್ಯವಹಾರಿಕವಾಗಿ, ಜ್ಞಾನಕ್ಕೆ ಆಂಗ್ಲ ಭಾಷೆ ಅಗತ್ಯವಾಗಿದ್ದು, ಕನ್ನಡತನ ಮನ ಮನೆಗಳಲ್ಲಿ ವಿಜೃಂಬಿಸಬೇಕು ಎಂದರು.
ಇದೇ ವೇಳೆ ಸಾಧಕರಾದ ವಕೀಲ ಬಸವಯ್ಯ, ಕನ್ನಡಸೇನೆ ಮಂಜುನಾಥ್, ದೀಕ್ಷಿತ್ನಾಯರ್ ಇವರಿಗೆ ಪ್ರತಿಭಾಂಜಲಿ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಗಾಯಕರಾದ ಡೇವಿಡ್ ಪ್ರತಿಭಾಂಜಲಿ, ಹಂಸ, ವಂದನಾ, ವರ್ಷಹೂಗಾರ್, ಶಂಕರ್, ಪ್ರಸನ್ನ, ಮೋಹನ್, ಶಶಿಕಲಾ, ಸರಿತಾ, ವಿಶ್ವಾಸ್ ಇವರು ಹಲವು ಕನ್ನಡ ಹಾಡುಗಳನ್ನು ಹಾಡಿದರು.ಸಮಾರಂಭದಲ್ಲಿ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಶಶಿಧರ್ ಈಚಗೆರೆ, 1ನೇ ಉಪರಾಜ್ಯಪಾಲ ಚಂದ್ರಶೇಖರ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರತಿಭಾಂಜಲಿ ಪ್ರೊ.ಡೇವಿಡ್ ಹಾಜರಿದ್ದರು.