ಕೇಂದ್ರವು ಸ್ವಾಮಿನಾಥನ್ ಶಿಫಾರಸು ಜಾರಿಗೊಳಿಸಲಿ

| Published : Jul 15 2024, 01:49 AM IST

ಸಾರಾಂಶ

ಕೇಂದ್ರ ಸರ್ಕಾರವು ಎಂ.ಎಸ್. ಸ್ವಾಮಿನಾಥನ್‌ರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ, ಆದರೆ, ಅದಕ್ಕಿಂತ ಕೃಷಿಗೆ ಹೂಡಿರುವ ಬಂಡವಾಳದ ಜೊತೆಗೆ ಶೇ.೫೦ರಷ್ಟು ಸೇರಿಸಿ ಆದಾಯ ಖಾತ್ರಿಗೊಳಿಸುವ ಶಿಫಾರಸು ಜಾರಿಗೆ ತಂದರೆ ಅವರಿಗೆ ಮತ್ತಷ್ಟು ಗೌರವ ನೀಡಿದಂತಾಗುತ್ತದೆ

ಕನ್ನಡಪ್ರಭ ವಾರ್ತೆ ಕೋಲಾರಮುಂಬರುವ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಸ್ವಾಮಿನಾಥನ್ ಶಿಫಾರಸಿನಂತೆ ಸಿ೨ ಪ್ಲಸ್ ೫೦ ಆಧಾರದ ಮೇಲೆ ಆದಾಯ ಖಾತ್ರಿಗೊಳಿಸಬೇಕು ಹಾಗೂ ದೇಶಾದ್ಯಂತ ಎಲ್ಲಾ ರೈತರ ಸಾಲ ಮನ್ನಾ ಮಾಡಿ ಋಣಮುಕ್ತರನ್ನಾಗಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಆಗ್ರಹಿಸಿದರು.ತಾಲೂಕಿನ ಆರಾಭಿಕೊತ್ತನೂರು ಶ್ರೀ ಸೋಮನಾಥೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.ರೈತರ ಆದಾಯ ಖಾತ್ರಿಗೊಳಿಸಲಿ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಂ.ಎಸ್. ಸ್ವಾಮಿನಾಥನ್‌ರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ, ಆದರೆ, ಅದಕ್ಕಿಂತಲೂ ಹೆಚ್ಚಾಗಿ ಕೃಷಿಗೆ ಹೂಡಿರುವ ಬಂಡವಾಳದ ಜೊತೆಗೆ ಶೇ.೫೦ರಷ್ಟು ಸೇರಿಸಿ ಆದಾಯ ಖಾತ್ರಿಗೊಳಿಸುವ ಶಿಫಾರಸನ್ನು ಜಾರಿಗೆ ತಂದರೆ ಅವರಿಗೆ ಮತ್ತಷ್ಟು ಗೌರವ ನೀಡಿದಂತಾಗುತ್ತದೆ ಎಂದರು.ರೈತಾಪಿ ಕೃಷಿಯನ್ನು ಕಾರ್ಪೊರೇಟ್ ಕೃಷಿಯನ್ನಾಗಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಬದಲಾವಣೆಯ ಆಶಯದೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ಮತ್ತು ಮುಡಾ ಹಗರಣಗಳ ಮೂಲಕ ಸದ್ದು ಮಾಡುತ್ತಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ೮೪೦ ದಿನಗಳಿಂದಲೂ ಭೂಸ್ವಾಧೀನ ವಿರುದ್ಧ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಕನಿಷ್ಠ ಸ್ಪಂದಿಸುತ್ತಿಲ್ಲವೆಂದು ಟೀಕಿಸಿದರು.

ಕೃಷಿ ಕ್ಷೇತ್ರದ ಹಿತ ಕಾಪಾಡಿ

ದೇಶವನ್ನು ಆಹಾರ ಸ್ವಾವಲಂಬನೆಯನ್ನಾಗಿ ಮಾಡಬೇಕಾದರೆ ದೇಶವು ರೈತಾಪಿ ಕೃಷಿಯ ಮೇಲೆ ಅವಲಂಬಿತವಾಗಬೇಕು, ಕೃಷಿ ರಂಗವನ್ನು ಮತ್ತು ರೈತ, ಕೃಷಿ ಕೂಲಿ ಕಾರ್ಮಿಕರ ಹಿತ ಕಾಪಾಡಲು ಕರ್ನಾಟಕ ಪ್ರಾಂತ ರೈತ ಸಂಘ ನಿರಂತರ ಹೋರಾಟ ನಡೆಸುತ್ತಿದೆ ಎಂದರು.ಹೈಕೋರ್ಟ್ ವಕೀಲ ಎಂ.ಶಿವಪ್ರಕಾಶ್ ಮಾತನಾಡಿ, ರೈತರು ತಮ್ಮ ಬೇಡಿಕೆಗಳ ಹೋರಾಟದ ಜೊತೆಗೆ ಕೃಷಿ ಉತ್ಪನ್ನಗಳ ಸಾಗಿಸುವ ಯಾವುದೇ ವಾಹನಕ್ಕೆ ಟೋಲ್‌ನಲ್ಲಿ ವಿನಾಯ್ತಿ ನೀಡುವಂತೆ ಹಾಗೂ ನಾಯಿ ಕೊಡೆಗಳಂತೆ ಪ್ರತಿ ಗ್ರಾಮದಲ್ಲಿಯೂ ಆರಂಭವಾಗುತ್ತಿರುವ ಮದ್ಯದಂಗಡಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಬೇಕು, ಇದಕ್ಕಾಗಿ ಯಾವುದೇ ಕಾನೂನು ಹೋರಾಟಕ್ಕೆ ತಮ್ಮ ಬೆಂಬಲ ಇರುತ್ತದೆ ಎಂದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್‌ಬಾಬು, ಕೆಪಿಆರ್ ಎಸ್ ಜಿಲ್ಲಾಧ್ಯಕ್ಷ ಟಿ.ಎಂ. ವೆಂಕಟೇಶ್, ಕೆಪಿಆರ್‌ಎಸ್ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್‌ಕುಮಾರ್, ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ರಾಜ್ಯ ಸಮಿತಿ ಸದಸ್ಯೆ ಗಂಗಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿ ವಿ. ನಾರಾಯಣರೆಡ್ಡಿ, ತಾಲೂಕು ಅಧ್ಯಕ್ಷ ಆಲಹಳ್ಳಿ ವೆಂಕಟೇಶಪ್ಪ, ಎನ್.ಎನ್. ಶ್ರೀರಾಮ್ ಇದ್ದರು.