ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರು ಸಬಕಾ ಸಾಥ್ ಸಬಕಾ ವಿಕಾಸ, ಅಚ್ಚೇದಿನ, ವಿಕಸಿತ ಭಾರತದಂತ ಹಸಿ ಸುಳ್ಳುಗಳ ಮೂಲಕ ಜನರಲ್ಲಿ ಭ್ರಮೆಗಳನ್ನು ಸೃಷ್ಟಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹುಬ್ಬಳ್ಳಿ: ರೈತ ಕಾರ್ಮಿಕರ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಧಾರವಾಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, 2022ರೊಳಗಾಗಿ ಎಲ್ಲರಿಗೂ ಪಕ್ಕಾ ಮನೆ ನಿರ್ಮಿಸುತ್ತೇವೆ, ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುತ್ತೇವೆ, ರೈತರ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ನಿಗದಿ ಮಾಡುವ ಶಾಸನ ತರುತ್ತೇವೆ ಎಂದೆಲ್ಲಾ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಸಬಕಾ ಸಾಥ್ ಸಬಕಾ ವಿಕಾಸ, ಅಚ್ಚೇದಿನ, ವಿಕಸಿತ ಭಾರತದಂತ ಹಸಿ ಸುಳ್ಳುಗಳ ಮೂಲಕ ಜನರಲ್ಲಿ ಭ್ರಮೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಬಾರ್ಕಿ, ಎ.ಎಸ್. ಪೀರಜಾದೆ, ಅಮೃತ ಇಜಾರಿ, ಭುವನಾ ಬಳ್ಳಾರಿ, ಶರಣು ಗೊನವಾರ, ಗುರುಸಿದ್ದಪ್ಪ ಅಂಬಿಗೇರ, ಬಸವಣ್ಣೆಪ್ಪ ನೀರಲಗಿ, ಎಂ.ಎಚ್. ಮುಲ್ಲಾ, ಅನೀಲ ಗದಗ, ಮಂಜುನಾಥ ಹುಜರಾತಿ, ಕಿರಣ ಪೂಜಾರ, ವಿನೋಧ ವಿರಾಪೂರ, ಎಂ.ಜಿ. ಕರಾದಿ, ಎಸ್.ಎನ್. ಇನಾಮದಾರ, ಎಫ್.ಬಿ. ಹರಕುಣಿ, ಖತಾಲಸಾಬ ಮುಲ್ಲಾ, ಹನಮಂತ ಅಂಬಿಗೇರ ಸೇರಿದಂತೆ ಸಿಐಟಿಯು, ಎಐಟಿಯುಸಿ, ಟಿಯುಸಿಸಿ, ಎಐಯುಟಿಯುಸಿ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.