ಸಾರಾಂಶ
ಲೈಂಗಿಕ ದೌರ್ಜನ್ಯ ಪ್ರಕರಣದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ಕೇಂದ್ರ ಸರ್ಕಾರ ಸಹಕಾರ ನೀಡಿದ್ದು, ಈಗ ರಾಜ್ಯ ಸರ್ಕಾರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರರಾದ ಸ್ವಾತಿ ಚಂದ್ರಶೇಖರ ದಾವಣಗೆರೆಯಲ್ಲಿ ಟೀಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಲೈಂಗಿಕ ದೌರ್ಜನ್ಯ ಪ್ರಕರಣದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ಕೇಂದ್ರ ಸರ್ಕಾರ ಸಹಕಾರ ನೀಡಿದ್ದು, ಈಗ ರಾಜ್ಯ ಸರ್ಕಾರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರರಾದ ಸ್ವಾತಿ ಚಂದ್ರಶೇಖರ ಟೀಕಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶ-ವಿದೇಶದಲ್ಲಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಇದರ ಬೆನ್ನಲ್ಲೇ ಟಿಕೆಟ್ ನೀಡದಂತೆ ಒತ್ತಡ ಹೇರಿದರೂ ಹಾಸನ ಕ್ಷೇತ್ರದ ಟಿಕೆಟ್ ನೀಡಿದೆ. ರಾಜಕೀಯ ಕ್ಷೇತ್ರದ ಗೋಮುಖವ್ಯಾಘ್ರ ಪ್ರಜ್ವಲ್ ರೇವಣ್ಣನ ಕುಕೃತ್ಯದಿಂದ ನೊಂದ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಬೇಕಿದೆ ಎಂದರು.
ಪ್ರಜ್ವಲ್ ಕೃತ್ಯದ ಬಗ್ಗೆ ರಾಜ್ಯ ಮಹಿಳಾ ಆಯೋಗ ದೂರು ನೀಡುತ್ತಲೇ, ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಪ್ರಜ್ವಲ್‌ಗೆ ಜರ್ಮನಿಯಲ್ಲಿ ತಲೆಮರೆಸಿಕೊಂಡಿರಲು ಕೇಂದ್ರ ಸರ್ಕಾರವೇ ಸಹಕಾರ ನೀಡಿದೆ. ಪ್ರಜ್ವಲ್ ಹೋಗುವಾಗ ಕೇಂದ್ರ ಏನು ಮಾಡುತ್ತಿತ್ತು? ರಾಜ್ಯ ಸರ್ಕಾರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದ್ದು, ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ. ತನಿಖೆ ವೇಳೆ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಇಲ್ಲಿರಬೇಕಲ್ಲವೇ ಎಂದು ಅವರು ಪ್ರಶ್ನಿಸಿದರು.ರಾಜಕೀಯ ಕುಟುಂಬಕ್ಕೆ ಸೇರಿದ ಡಾ.ಪ್ರಭಾ ಮಲ್ಲಿಕಾರ್ಜುನ ಅಧಿಕಾರಕ್ಕಾಗಿ ಹಪಾಹಪಿಸಿಲ್ಲ. ಇಂತಹವರು ರಾಜಕೀಯ ಕ್ಷೇತ್ರಕ್ಕೆ ಅಗತ್ಯ. ದಾವಣಗೆರೆ ಕ್ಷೇತ್ರದಿಂದ ಡಾ.ಪ್ರಭಾರನ್ನು ಸಂಸದೆಯಾಗಿ ಆಯ್ಕೆ ಮಾಡಬೇಕು. 70 ಸಾವಿರ ಆರೋಗ್ಯ ಶಿಬಿರ ಆಯೋಜಿಸಿದ್ದಾರೆ. ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಇಡೀ ದಾವಣಗೆರೆ ಜಿಲ್ಲೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಮತ್ತಷ್ಟು ಕೆಲಸ ಮಾಡುತ್ತಾರೆ ಎಂದು ಸ್ವಾತಿ ಹೇಳಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ, ಮುಖಂಡರಾದ ಸುಷ್ಮಾ ಪಾಟೀಲ್, ಕವಿತಾ ಚಂದ್ರಶೇಖರ, ಸಲ್ಮಾ ಬಾನು, ಗಿರಿಜಮ್ಮ, ಸುನೀತಾ ಭೀಮಣ್ಣ, ದಾಕ್ಷಾಯಣಮ್ಮ ಇತರರು ಇದ್ದರು.- - - -2ಕೆಡಿವಿಜಿ8:
ದಾವಣಗೆರೆಯಲ್ಲಿ ಕೆಪಿಸಿಸಿ ವಕ್ತಾರರಾದ ಸ್ವಾತಿ ಚಂದ್ರಶೇಖರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.