ಶ್ರೀ ರಾಮಚಂದ್ರಾಪುರ ಮಠದ ಭಟ್ಕಳ ವಲಯದ ನಾಲ್ಕನೇ ವಲಯೋತ್ಸವ ಕಾರ್ಯಕ್ರಮ ಬೇಂಗ್ರೆಯ ನಾಗರಾಜ ಭಟ್ಟ ಅವರ ಮನೆಯಲ್ಲಿ ಮಹಿಳೆಯರ ಸಾಮೂಹಿಕ ಕುಂಕುಮಾರ್ಚನೆಯೊಂದಿಗೆ ಆರಂಭವಾಯಿತು.
ಬೇಂಗ್ರೆಯಲ್ಲಿ ಭಟ್ಕಳ ಹವ್ಯಕ ವಲಯದ 4ನೇ ವಲಯೋತ್ಸವ ಸಂಪನ್ನಕನ್ನಡಪ್ರಭ ವಾರ್ತೆ ಭಟ್ಕಳ
ಶ್ರೀ ರಾಮಚಂದ್ರಾಪುರ ಮಠದ ಭಟ್ಕಳ ವಲಯದ ನಾಲ್ಕನೇ ವಲಯೋತ್ಸವ ಕಾರ್ಯಕ್ರಮ ಬೇಂಗ್ರೆಯ ನಾಗರಾಜ ಭಟ್ಟ ಅವರ ಮನೆಯಲ್ಲಿ ಮಹಿಳೆಯರ ಸಾಮೂಹಿಕ ಕುಂಕುಮಾರ್ಚನೆಯೊಂದಿಗೆ ಆರಂಭವಾಯಿತು.ಹಿರಿಯರಾದ ವೇ. ಮೂ. ಕೃಷ್ಣಾನಂದ ಭಟ್ಟ ಬಲ್ಸೆ ಮಾತನಾಡಿ, ಆಧ್ಯಾತ್ಮಿಕ ಚಿಂತನೆ, ಭಜನೆ, ಪ್ರಾರ್ಥನೆಯಿಂದ ಪ್ರತಿಯೊಬ್ಬರಲ್ಲಿಯೂ ಬದಲಾವಣೆ ಕಾಣಬಹುದು. ನಾವು ಜಗತ್ತನ್ನೇ ಬದಲಾಯಿಸುತ್ತೇವೆ ಎಂದು ಹೊರಡುವ ಮುನ್ನ ನಮ್ಮಲ್ಲಿ ನಾವು ಬದಲಾವಣೆ ತಂದುಕೊಳ್ಳಬೇಕು. ಭಜನೆ ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರಬಲ್ಲದು ಎಂದೂ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಲಯದ ಅಧ್ಯಕ್ಷ ಎಂ.ವಿ. ಹೆಗಡೆ, ಈ ಬಾರಿ ದೀಪ ಕಾಣಿಕೆ ಸಮರ್ಪಣೆಗೆ ಹೊಸ ಸಂಪ್ರದಾಯವನ್ನು ಆರಂಭಿಸಿದ್ದು ಉತ್ತಮ ಸ್ಪಂದನೆ ದೊರೆತಿದೆಯಾದರೂ ಶೇ.೧೦೦ರಷ್ಟು ಸಾಧನೆ ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ ಎಂದರು.ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ಇಂತಹ ವಲಯೋತ್ಸವದಿಂದ ಎಲ್ಲರೂ ಒಂದೆಡೆ ಸೇರಿ ಚಿಂತನೆ ನಡೆಸಲು ಅನುಕೂಲವಾಗುವುದು. ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ ದೊರೆಯುವುದು ಎಂದರು.
ಪ್ರಮುಖರಾದ ರೇಷ್ಮಾ ಯೋಗೀಶ ಭಟ್ಟ, ಮಂಗಲಾ ಉಪಾಧ್ಯಾಯ, ಗುರಿಕಾರ ಪಿ.ಎನ್. ಭಟ್ಟ ಉಪಸ್ಥಿತರಿದ್ದರು. ಮಂಡಲದ ಸದಸ್ಯ ಶಂಭು ಹೆಗಡೆ ನಿರೂಪಿಸಿದರು. ಜಿ.ವಿ. ಶಿರಾಲಿಯ ಪ್ರಾಂಶುಪಾಲ ಎಸ್.ಜಿ. ಹೆಗಡೆ ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜಕ ನಾಗರಾಜ ಭಟ್ಟ ಬೇಂಗ್ರೆ ವಂದಿಸಿದರು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತಗಾರ ಎನ್.ವಿ. ಹೆಗಡೆ ಸಂಗೀತ ಹಾಗೂ ಅವರ ಪುತ್ರ ತಬಲಾ ಸಾಥ್ ನೀಡಿದರು.