ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ರಾಜ್ಯದಲ್ಲಿ ಮೌಢ್ಯ, ಕಂದಾಚಾರ, ವಾಮಾಚಾರವನ್ನು ಹೋಗಲಾಡಿಸಲು ಮುಖ್ಯಮಂತ್ರಿಗಳು ವೈಜ್ಞಾನಿಕ ಅಕಾಡೆಮಿ ಪ್ರಾರಂಭ ಮಾಡಿ. ಇದರಿಂದ ಮೌಢ್ಯ ಮುಕ್ತ ಕರ್ನಾಟಕ ಮಾಡಲು ಸಾಧ್ಯವಾಗುತ್ತದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಂತನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಹೇಳಿದರು.ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಶ್ರೀ ಶಾರದಾ ಇಂಟರ್‌ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯಲ್ಲಿ ಏರ್ಪಡಿಸಿದ್ದ ಎಸ್ಎಸ್ಐಸಿಎಸ್ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ನಡೆದ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾ ಮಿತ್ರರಿಗೆ ಮೌಢ್ಯ, ಕಂದಾಚಾರ, ವಾಮಾಚಾರವನ್ನು ಬದಿಗೊತ್ತಿ ಎಂದು ಹೇಳಿದ್ದಾರೆ. ದಿಟ್ಟತನದಿಂದ, ಧೈರ್ಯದಿಂದ ಹೇಳುವ ಏಕೈಕ ವ್ಯಕ್ತಿ ಸಿದ್ದರಾಮಯ್ಯ ಮಾತ್ರ. ಅದೇ ರೀತಿ ವೈಜ್ಞಾನಿಕ ಅಕಾಡೆಮಿ ಪ್ರಾರಂಭ ಮಾಡಿ ಎಂದರು.
ಪೋಷಕರು ತಮ್ಮ ಮಕ್ಕಳಿಗೆ ಧನಾತ್ಮಕವಾದುದನ್ನು ಹೇಳಿಕೊಡಿ. ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳಲ್ಲಿ ಧನಾತ್ಮಕ ಚಿಂತನೆ ಮೂಡಿಸಿ, ಪ್ರಶ್ನಿಸುವುದನ್ನು ಕಲಿಸಿ, ಸಂಶೋಧನೆ ಮಾಡುವುದನ್ನು ಕಲಿಸಿ, ಮಾಹಿತಿ ಕಲೆಹಾಕುವುದನ್ನು ಹೇಳಿ ಕೊಡಿ, ಎಲ್ಲರೊಂದಿಗೆ ಹೊಂದಿಕೊಳ್ಳುವುದನ್ನು ಕಲಿಸಿ ಆಗ ಮಕ್ಕಳು ಜಗತ್ತನ್ನೇ ಗೆಲ್ಲುತ್ತವೆ. ಇತ್ತೀಚೆಗೆ ನಮ್ಮ ಮಕ್ಕಳು ರೋಬೋಗಳಾಗುತ್ತಿದ್ದಾರೆ. ಬೇರೆಯದನ್ನು ಯೋಚಿಸುತ್ತಿಲ್ಲ. ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಬೇಡಿ ಇದರಿಂದ ಮಕ್ಕಳು ಒಂಟಿತನಕ್ಕೆ ತುತ್ತಾಗುತ್ತಿದ್ದಾರೆ. ಖಿನ್ನತೆಗೆ ಒಳಗಾಗುತ್ತಾರೆ. ಕತ್ತಲೆ ಮನೆಯಲ್ಲಿ ಕಾಲ ಕಳೆಯುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾದ, ಬರ್ಬರವಾದವು ಹೆಚ್ಚಾಗಿದ್ದಾವೆ. ನಿಮ್ಮ ಮಕ್ಕಳು ಸಧೃಡವಾದ ಶಕ್ತಿಶಾಲಿಗಳಾಗಿ ಬೆಳೆಯಬೇಕಾದರೆ ಅವರಿಗೆ ಧನಾತ್ಮಕ ಚಿಂತನೆ ಮೂಡಿಸಿ ಎಂದರು.ಜನರು ಮೂಡನಂಬಿಕೆಯಿಂದ ಹೊರಬನ್ನಿ. ವಾಸ್ತುವಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ವಾಸ್ತುವಿನ ಹೆಸರೇಳಿ ಮೋಸ ಮಾಡುತ್ತಾರೆ. ಮನೆಯ ವಾಸ್ತುವನ್ನಲ್ಲಾ ನಾವು ಗಮನಿಸಬೇಕಾಗಿರುವುದು ಮನಸ್ಸಿನ ವಾಸ್ತು. ಮನಸ್ಸಿನ ವಾಸ್ತುವನ್ನು ಸರಿಯಾಗಿಟ್ಟುಕೊಂಡರೆ ಜೀವನ ಸುಂದರವಾಗಿರುತ್ತದೆ. ಕೆಲವರು ಪವಾಡ ಮಾಡುತ್ತೇನೆಂದು ನಮ್ಮನ್ನು ಮೋಸ ಮಾಡುತ್ತಾರೆ. ಏನೋ ಸೃಷ್ಟಿ ಮಾಡುತ್ತೇನೆಂದು ಹೇಳಿ ನಮ್ಮನ್ನು ನಂಬಿಸುತ್ತಾರೆ. ದೇವರಿಗೂ ಮೋಸ ಮಾಡುವ ಜೀವಿ ಮನುಷ್ಯ ಮಾತ್ರ. ಮನಷ್ಯ ದೇವರಿಗೂ ಮೋಸ ಮಾಡುತ್ತಾನೆ. ಪಂಚಾಗಕ್ಕೆ ಬಲಿಯಾಬೇಡಿ ಪಂಚ ಅಂಗಗಳ ಬಗ್ಗೆ ಗಮನ ಕೊಡಿ. ಪಂಚ ಅಂಗಗಳು ಸರಿಯಾಗಿದ್ದರೆ ಜಗತ್ತನ್ನು ಗೆಲ್ಲುತ್ತೀರಿ ಎಂದರು.
ಶಾಲೆಯ ಅಧ್ಯಕ್ಷ ರಂಗನಾಥ್ ಜೆ. ಮಾತನಾಡಿ, ಪ್ರತಿಯೊಬ್ಬ ಮಗುವು ವಜ್ರದಂತೆ ಪೋಷಕರು ತಮ್ಮ ಮಕ್ಕಳನ್ನು ವಜ್ರಗಳಂತೆ ಪೋಷಣೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯಮಾರಾಟ ಹೆಚ್ಚುತ್ತಿದೆ. ಬೆಂಕಿಪೊಟ್ಟಣದಷ್ಟೇ ಸಲೀಸಾಗಿ ಎಲ್ಲವೂ ಸಿಗುತ್ತಿದೆ. ಇದರಿಂದ ಗ್ರಾಮಗಳಲ್ಲಿ ಕುಡಿತಕ್ಕ ಬಲಿಯಾಗುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಸರಕಾರ ಕೂಡಲೇ ಮದ್ಯಮುಕ್ತ ಗ್ರಾಮಗಳನ್ನಾಗಿ ಮಾಡಬೇಕು. ಗ್ರಾಮಸ್ಥರೂ ಸಹ ಇದಕ್ಕೆ ಕೈಜೋಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಇಂಟರ್‌ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಉಪಾಧ್ಯಕ್ಷರಾದ ಶಾರದಮ್ಮ, ಕಾರ್ಯದರ್ಶಿಗಳಾದ ಬಾಲಕೃಷ್ಣ, ಸೋಮಶೇಖರ್, ಉಪ ಕಾರ್ಯದರ್ಶಿ ಪುಷ್ಪಶೇಖರ್, ಮುಖ್ಯ ಶಿಕ್ಷಕ ನದೀಮ್ ಅಜ್ಮತ್, ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಶಿವಕುಮಾರ್, ಶಾಲಾ ಹಿತೈಷಿಗಳಾದ ಪುಟ್ಟಮ್ಮ, ರಮ್ಯ ರಂಗನಾಥ್, ಚೇತನ್ ಸೇರಿದಂತೆ ಹಲವರು ಹಾಜರಿದ್ದರು.