ಮಗು ಮನುಕುಲದ ಆಸ್ತಿಯಾಗಲಿ: ಮೇಘಾಲಯ ರಾಜ್ಯಪಾಲ ವಿಜಯಶಂಕರ

| Published : Feb 23 2025, 12:34 AM IST

ಮಗು ಮನುಕುಲದ ಆಸ್ತಿಯಾಗಲಿ: ಮೇಘಾಲಯ ರಾಜ್ಯಪಾಲ ವಿಜಯಶಂಕರ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಅವರಿಗೆ ಪೌಷ್ಟಿಕ ಆಹಾರ ಸಿಗಬೇಕು. 4ರಿಂದ 14 ವರ್ಷದಲ್ಲಿ ಮಕ್ಕಳ ಶಾರೀರಿಕ ಬೆಳೆವಣಿಗೆ ಜತೆಗೆ ಅವರ ಮಾನಸಿಕ ಬೆಳವಣಿಗೆ ಸಹ ಆಗುತ್ತದೆ. ಕೆಲವೊಂದು ಮಕ್ಕಳ ಶಾರೀರಿಕ ಅಂಗವೈಕಲ್ಯ ಅನುವಂಶೀಕವಾಗಿ ಬರುತ್ತದೆ.

ಕೊಪ್ಪಳ:

ಮಗುವನ್ನು ಮನುಕುಲದ ಆಸ್ತಿಯನ್ನಾಗಿ ಮಾಡುವ ಬಹುದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ ಹೇಳಿದರು.

ಅವರು ಶನಿವಾರ ದಿವ್ಯಾಂಗ ಮಕ್ಕಳ ಶಾಲೆ, ಹಿಂದು ಸೇವಾ ಪ್ರತಿಷ್ಠಾನ ಮತ್ತು ಮಹಾತ್ಮಗಾಂಧಿ ಅನಾಥ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಗರದಲ್ಲಿ ನಡೆಸುತ್ತಿರುವ ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆಗೆ ಭೇಟಿ ನೀಡಿದ ನಂತರ ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಅವರಿಗೆ ಪೌಷ್ಟಿಕ ಆಹಾರ ಸಿಗಬೇಕು. 4ರಿಂದ 14 ವರ್ಷದಲ್ಲಿ ಮಕ್ಕಳ ಶಾರೀರಿಕ ಬೆಳೆವಣಿಗೆ ಜತೆಗೆ ಅವರ ಮಾನಸಿಕ ಬೆಳವಣಿಗೆ ಸಹ ಆಗುತ್ತದೆ. ಕೆಲವೊಂದು ಮಕ್ಕಳ ಶಾರೀರಿಕ ಅಂಗವೈಕಲ್ಯ ಅನುವಂಶೀಕವಾಗಿ ಬರುತ್ತದೆ. ಅವರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸುವ ಕೆಲಸ ಮಾಡಬೇಕು ಎಂದರು.

ಸಂಬಂಧಿಸಿದ ಇಲಾಖೆಯ ಮೂಲಕ ಇಂತಹ ಮಕ್ಕಳಿಗೆ ಸೌಲಭ್ಯ ಒದಗಿಸಬೇಕು ಎಂದ ಅವರು, ಮೈಸೂರಿನಲ್ಲಿ ಸ್ಪೀಚ್ ಆ್ಯಂಡ್‌ ಹಿಯರಿಂಗ್ ಸಂಸ್ಥೆ ಇದೆ. ಇದು ಮೈಸೂರು ಮಹಾರಾಜರು ಪ್ರಾರಂಭಿಸಿದರು. ಈ ಸಂಸ್ಥೆ ಇಂತಹ ವಿಶೇಷಚೇತನ ಮಕ್ಕಳ ಸರ್ವೇ ಮಾಡುತ್ತವೆ. ಸತ್ಯಸಾಯಿ ಟ್ರಸ್ಟಿನ ಮಧುಸೂಧನ್ ಬಾಬಾ ಎಂಬುವರು ಇಂತಹ ಮಕ್ಕಳಿಗೆ ಉಚಿತ ಸೇವೆ ನೀಡುತ್ತಾರೆ. ಅವರಿಗೆ ಇಲ್ಲಿಗೆ ಬರಲು ತಿಳಿಸುತ್ತೇನೆ ಎಂದು ಹೇಳಿದರು.

ಇದೊಂದು ಪುಣ್ಯದ ಕಾರ್ಯ. ಇದನ್ನು ಮಾಡಲು ಮನಸ್ಸು ಬೇಕು. ಅದನ್ನು ಮಾಡಿ ತೋರಿಸಿದ್ದೀರಿ. ನಾನು ಬದುಕುವ ಜತೆಗೆ ಸಮಾಜವೂ ಬದುಕಬೇಕು. ನಾನೊಬ್ಬನೆ ಬದುಕಿದರೆ ಸಾಲದು ಎಂದ ಅವರು, ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದರು.

ಈ ವೇಳೆ ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಹಿಂದು ಸೇವಾ ಪ್ರತಿಷ್ಠಾನ ಸಂಸ್ಥೆಯ ಎಂ.ಡಿ. ಮಿಲಿಂದ್, ಸಂಚಾಲಕ ಸುಧಾಕರ, ಸಿ.ವಿ. ಚಂದ್ರಶೇಖರ, ಬಸವರಾಜ ಪುರದ, ಡಾ. ಬಸವರಾಜ, ಮಹೇಶ ನಾಲ್ವಾಡ, ರಾಜೇಂದ್ರ ಜೈನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.