ಸಾರಾಂಶ
ಕೊಪ್ಪಳ:
ಪ್ರತಿ ಮಗುವಿನ ಹಕ್ಕು ಅನುಭವಿಸಲು ಮತ್ತು ಆನಂದಿಸಲು ಅನುಕೂಲಕರ ಪರಿಸರ ನಿರ್ಮಿಸಿ ಮಗುವಿನ ಘನತೆ ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.ಜಿಲ್ಲಾಡಳಿತ ಕಚೇರಿಯಲ್ಲಿ ಶನಿವಾರ ವಸತಿ ನಿಲಯಗಳ ನಿಲಯ ಪಾಲಕರು, ಪ್ಯಾರಾ ಮೆಡಿಕಲ್ ಕಾಲೇಜುಗಳ ಪ್ರಾಂಶುಪಾಲರು ಮತ್ತು ಮುಖ್ಯಸ್ಥರಿಗೆ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕು, ಮಕ್ಕಳಿಗೆ ಸಂಬಂಧಿಸಿದ ಕಾನೂನು ಮತ್ತು ಮಕ್ಕಳ ರಕ್ಷಣಾ ನೀತಿಗಳ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಗು ಸುರಕ್ಷಿತ, ರಕ್ಷಣಾತ್ಮಕ ಮತ್ತು ಸಶಕ್ತ ಪರಿಸರದಲ್ಲಿ ಬೆಳೆಯಬೇಕು. ಆ ಮಗುವಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಮಗು ತನ್ನ ಸಾಮರ್ಥ್ಯ ತಲುಪಲು ಅವಕಾಶ ಒದಗಿಸಬೇಕು. ಮಕ್ಕಳು ತಮ್ಮ ಹಕ್ಕು ಅನುಭವಿಸಲು ಮತ್ತು ಆನಂದಿಸಲು ಅನುಕೂಲಕರ ಪರಿಸರ ನಿರ್ಮಿಸಲು ಇಡೀ ಸಮುದಾಯ ಮುಂದಾಗಬೇಕು ಎಂದರು.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಮಾತನಾಡಿ, ಜಿಲ್ಲೆಯ ವಸತಿ ಶಾಲೆಯಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯ, ವಸತಿ ನಿಲಯದಿಂದ ಮಕ್ಕಳು ಈಜಾಡಲೆಂದು ತೆರಳಿದ ವೇಳೆ ಮೃತಪಟ್ಟ ಪ್ರಕರಣ ವರದಿಯಾಗಿವೆ. ಈ ಕುರಿತು ನಿಲಯಪಾಲಕರು ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತೆ ವಹಿಸಬೇಕೆಂದು ಸೂಚಿಸಿದರು.
ಯುನಿಸೆಫ್-ಮಕ್ಕಳ ರಕ್ಷಣಾಯೋಜನೆ ಕೊಪ್ಪಳದ ವಿಭಾಗೀಯ ಸಂಯೋಜಕ ಡಾ. ಕೆ.ರಾಘವೇಂದ್ರ ಭಟ್ ಮಾತನಾಡಿದರು. ಕೊಪ್ಪಳದ ವ್ಯವಸ್ಥಾಪಕ ಹರೀಶ್ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಮಿಷನ್ ವಾತ್ಸಲ್ಯ ಕುರಿತು ತರಬೇತಿ ನೀಡಿದರು.ಕಾರ್ಯಕ್ರಮದಲ್ಲಿ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ ಕಡಗದ, ಡಿಡಿಪಿಐ ಜಗದೀಶ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಜ್ಮೀರ ಅಲಿ ಇತರರು ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಲೀಲಾ ವನ್ನೂರು ನಿರೂಪಿಸಿದರು, ರವಿಕುಮಾರ ಪವಾರ ಸ್ವಾಗತಿಸಿದರು, ಪ್ರತಿಭಾ ಪ್ರಾರ್ಥಿಸಿದರು, ಪ್ರಶಾಂತರೆಡ್ಡಿ ವಂದಿಸಿದರು.