ಮಕ್ಕಳ ಹಕ್ಕು ಕಾವಲು ಸಮಿತಿ ಸಮರ್ಥವಾಗಿ ಕಾರ್ಯ ನಿರ್ವಹಿಸಲಿ : ಸಿಇಒ ಕೀರ್ತನಾ

| Published : Aug 19 2025, 01:00 AM IST

ಮಕ್ಕಳ ಹಕ್ಕು ಕಾವಲು ಸಮಿತಿ ಸಮರ್ಥವಾಗಿ ಕಾರ್ಯ ನಿರ್ವಹಿಸಲಿ : ಸಿಇಒ ಕೀರ್ತನಾ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ‘ಭದ್ರ ಬಾಲ್ಯ’ ಯೋಜನೆಯಡಿ ಪ್ರತೀ ಗ್ರಾಪಂ ಮಟ್ಟದಲ್ಲಿ ಮಕ್ಕಳ ಹಕ್ಕು ಕಾವಲು ಸಮಿತಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಹೇಳಿದರು.

- ಭದ್ರ ಬಾಲ್ಯ ಯೋಜನೆ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

‘ಭದ್ರ ಬಾಲ್ಯ’ ಯೋಜನೆಯಡಿ ಪ್ರತೀ ಗ್ರಾಪಂ ಮಟ್ಟದಲ್ಲಿ ಮಕ್ಕಳ ಹಕ್ಕು ಕಾವಲು ಸಮಿತಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಹೇಳಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬೆಂಗಳೂರಿನ ಕೆ.ಎಚ್.ಪಿ.ಟಿ. ಆಶ್ರಯದಲ್ಲಿ ಸೋಮವಾರ ಜಿಪಂನಲ್ಲಿ ಭದ್ರ ಬಾಲ್ಯದ ಪ್ರಧಾನ ಆಶಯಗಳಲ್ಲಿ ಒಂದಾದ ಗ್ರಾಪಂ ಮಟ್ಟದ ಕಾವಲು ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.15 ಮಂದಿ ಒಳಗೊಂಡ ಮಹಿಳಾ ಮತ್ತು ಮಕ್ಕಳ ಹಕ್ಕು ಕಾವಲು ಸಮಿತಿಗೆ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆ ನಿರ್ವಹಿಸುವ ಸಾಮರ್ಥ್ಯ ಮತ್ತು ಅಧಿಕಾರ ಇದೆ. ಈ ಸಮಿತಿಗೆ ಮಗುವಿನ ಅಪೌಷ್ಟಿಕತೆ, ಹಸಿವಿನ ಸಮಸ್ಯೆ, ಲೈಂಗಿಕ ಶೋಷಣೆ, ಕೌಟುಂಬಿಕ ಹಿಂಸೆ, ಶಾಲೆಗೆ ಹೋಗದಿರುವುದು ಇತ್ಯಾದಿ ಸಮಸ್ಯೆ ನಿರ್ವಹಣೆ ಜೊತೆಗೆ ಅಧಿಕಾರವೂ ಇದೆ. ಈ ಸಮಿತಿಯಲ್ಲಿ ಪೊಲೀಸ್ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮುಖ್ಯ ಶಿಕ್ಷಕರು, ಸ್ವಸಹಾಯ ಸಂಘದ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಒಂದು ವೇಳೆ ಆ ಗ್ರಾಪಂ ಅಧ್ಯಕ್ಷರು ಮಹಿಳೆಯಾಗಿದ್ದರೆ ಅವರೇ ಈ ಸಮಿತಿ ಅಧ್ಯಕ್ಷರೂ ಆಗಿರುತ್ತಾರೆ ಎಂದು ತಿಳಿಸಿದರು. ಬಾಲ್ಯವಿವಾಹದಂತಹ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕತೆಯರು ಅಥವಾ ಮೇಲ್ವಿಚಾರಕರನ್ನು ಹೊಣೆ ಮಾಡ ಲಾಗುತ್ತಿದೆ. ಬಾಲ್ಯವಿವಾಹ ನಡೆಯುತ್ತಿರುವ ವೇಳೆ ಈ ಬಗ್ಗೆ ದೂರು ನೀಡಬೇಕಾಗುತ್ತದೆ. ಒಂದು ವೇಳೆ ಬಾಲ್ಯ ವಿವಾಹ ನಡೆಸಿದ ಕುಟುಂಬದವರು ಪ್ರಭಾವಿಗಳಾಗಿದ್ದರೆ, ದೂರು ನೀಡಿದ ಕಾರಣಕ್ಕೆ ಊರಿನಿಂದ ಹೊರ ಹಾಕುವುದು. ಬೆದರಿಕೆ ಹಾಕುವ ಸಂದರ್ಭಗಳು ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಸಮಿತಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು. ಬೆಳೆಯುವ ಮಗುವಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎನ್ನುವುದು ‘ಭದ್ರ ಬಾಲ್ಯ ಯೋಜನೆ ಮುಖ್ಯ ಉದ್ದೇಶ. ನಮ್ಮ ಜಿಲ್ಲೆಯಲ್ಲಿ ಪೋಕ್ಸೋ, ಬಾಲ್ಯ ಗರ್ಭಿಣಿ, ಬಾಲ್ಯ ವಿವಾಹ ಪ್ರಕರಣ ಹೆಚ್ಚುತ್ತಲೇ ಇವೆ. ಇದು ಇಡೀ ಕುಟುಂಬದ ಪ್ರಶ್ನೆ.. ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಗರ್ಭಿಣಿಯಾದಲ್ಲಿ, ಮಾನಸಿಕ, ದೈಹಿಕವಾಗಿ ಸಾಮರ್ಥ್ಯ ವಿಲ್ಲದೆ ಗರ್ಭಿಣಿಯಾಗಿ ತಾಯ್ತನಕ್ಕೆ ಒಳಗಾಗುವುದರಿಂದ ಆ ರೀತಿ ಹುಟ್ಟಿದ ಮಗುವೂ ಸಮರ್ಥ ವಾಗಿರುವುದಿಲ್ಲ. ಬಾಲ್ಯ ವಿವಾಹದ ಬಗ್ಗೆ ಪ್ರಕರಣ ದಾಖಲಿಸುವುದರಿಂದ ಹುಡುಗನ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿ ನಿನ್ನನ್ನು ಮದುವೆಯಾದ ಕಾರಣದಿಂದ ಮನೆ ಮಗ ಜೈಲು ಸೇರಬೇಕಾಯಿತು ಎನ್ನುವ ನಿಂದನೆಗೂ ಒಳಗಾಗ ಬೇಕಾಗುತ್ತದೆ. ಹೀಗಾದಾಗ ಆಗತಾನೇ ಹುಟ್ಟಿದ ಮಗುವಿನ ಗತಿಯೇನು ? ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಅಕಾಲಿಕ ಗರ್ಭ ಧಾರಣೆಗೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣ ವಾಗದಂತೆ, ಶೋಷಣೆಗೆ ಒಳಗಾಗದಂತೆ ಮುಂಜಾಗ್ರತೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ಮಹಿಳಾ ಪ್ರಧಾನವಾದ ಈ ಜಿಲ್ಲೆಯಲ್ಲಿ 1000 ದಷ್ಟಿದ್ದ ಹೆಣ್ಣಿನ ಜನನ ಪ್ರಮಾಣ ಈಗ 900ಕ್ಕೆ ಕುಸಿದಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಣ್ಣು ಮಕ್ಕಳ ಜೀವನ ಉಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಪೋಕ್ಸೋ, ಬಾಲ್ಯ ವಿವಾಹ, ಬಾಲ ಗರ್ಭಿಣಿಯಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪಂಚಾಯಿತಿ ಮಟ್ಟದ ಕಾವಲು ಸಮಿತಿ ಮೂಲಕ ಕ್ರಮ ವಹಿಸಲಾಗಿದೆ. ಈ ಜಿಲ್ಲೆಯಲ್ಲಿ ಏಳೆಂಟು ಬಾಲ್ಯ ವಿವಾಹ ತಡೆದಿರುವ ಹೆಮ್ಮೆ ನಮ್ಮದು. ಇದು ಪ್ರಥಮ ಹೆಜ್ಜೆ. ಗ್ರಾಮ ಮಟ್ಟದಲ್ಲಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾವಲು ಸಮಿತಿಯನ್ನು ಉತ್ತೇಜಿಸಿದರೆ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣ ತಡೆಗಟ್ಟಬಹುದು. ಹೆಣ್ಣಿಗೆ 18 ವರ್ಷದ ಬಳಿಕ ಮದುವೆ ಎಂಬ ಕಾನೂನಿದೆ. ಕೆಲವು ಕಾರಣಗಳಿಂದ ಬಾಲ್ಯ ವಿವಾಹವಾಗಿ ಮುಂದೆ ಕಷ್ಟಪಡುತ್ತಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ. ಇಂತಹ ಸಮಸ್ಯೆಗಳಿಗೆ ಹೆಣ್ಣು ಮಕ್ಕಳು ಒಳಗಾಗದಂತೆ ನಾವು ನೋಡಿಕೊಳ್ಳಬೇಕು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾರ್ಮಿಕರು, ಕೆಲವೊಂದು ಸಮುದಾಯ, ವಲಸಿಗರಲ್ಲಿ ಹಾಗೂ ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳು ಇಂತಹ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಕಾವಲು ಸಮಿತಿ ಜವಾಬ್ದಾರಿ ಯುತವಾಗಿ ಕೆಲಸ ಮಾಡಬೇಕು. ಸಮಾಜಕ್ಕೆ ಹಾಗೂ ಹೆಣ್ಣು ಮಕ್ಕಳ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ನಮ್ಮದು ಎಂದು ಹೇಳಿದರು. ಕೆ.ಎಚ್.ಪಿ.ಟಿ.ಯ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಚ್.ಎಲ್.ಮೋಹನ್ ಮಾತನಾಡಿದರು. ಕೆಎಚ್‌ಪಿಟಿ ಸಕ್ರಿಯ ಕಾವಲು ಸಮಿತಿ ತರಬೇತಿ ಕೈಪಿಡಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಮಂಜುನಾಥ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ವೈ.ಆಲದಾರ್ತಿ ಉಪಸ್ಥಿತರಿದ್ದರು. 18 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಮಟ್ಟದ ಕಾವಲು ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಉದ್ಘಾಟಿಸಿದರು. ಡಿಸಿ ಮೀನಾ ನಾಗರಾಜ್‌, ಜಿಪಂ ಸಿಇಓ ಕೀರ್ತನಾ ಇದ್ದರು.