ದೇಶ ಪ್ರಗತಿ ಪಥದಲ್ಲಿ ಮುನ್ನಡೆಯಲು ಮಕ್ಕಳು ಸುಸಂಸ್ಕೃತರಾಗಲಿ

| Published : Apr 14 2024, 01:49 AM IST

ದೇಶ ಪ್ರಗತಿ ಪಥದಲ್ಲಿ ಮುನ್ನಡೆಯಲು ಮಕ್ಕಳು ಸುಸಂಸ್ಕೃತರಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ನಮ್ಮ ಮಕ್ಕಳಿಗೆ ಮನೆ ಮತ್ತು ಶಾಲೆಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿ-ಸಂಸ್ಕಾರಗಳ ಶಿಕ್ಷಣ ದೊರೆಯದಾಗಿದೆ

ಗದಗ: ಮಕ್ಕಳು ಚಿಕ್ಕಂದಿನಿಂದಲೇ ಕ್ರಮಬದ್ಧ ಜೀವನಶೈಲಿ ಅಳವಡಿಸಿಕೊಂಡು ಬೆಳೆಯಬೇಕು, ಇಲ್ಲದಿದ್ದರೆ ಸದ್ವರ್ತನೆಯ ಗುಣಶೀಲ ನಾಗರಿಕರಾಗಿ ಬೆಳೆಯಲಾರರು. ಮಕ್ಕಳು ಸಚ್ಛಾರಿತ್ರ್ಯವಂತರಾಗಿ ಬೆಳೆಯದಿದ್ದರೆ ದೇಶ ಎಷ್ಟೇ ಪ್ರಗತಿ ಹೊಂದಿದರೂ ಪ್ರಗತಿಯ ಪರಿಣಾಮ ಫಲಕಾರಿಯಾಗದೇ ಮುಂದೊಂದು ದಿನ ಆ ಪ್ರಗತಿ ಹಿನ್ನಡೆಯಾಗಬಹುದು ಎಂದು ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಧ್ಯಕ್ಷ ಕೆ.ಎಚ್. ಬೇಲೂರ ಹೇಳಿದರು.

ಅವರು ನಗರದ ಬಸವ ಯೋಗ ಕೇಂದ್ರ ಮತ್ತು ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-2024 ಇವರುಗಳ ಸಹಯೋಗದಲ್ಲಿ ಬೇಸಿಗೆ ರಜೆ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ (ಬಸವ ಪ್ರಭೆ ಕ್ಯಾಂಪಸ್) ಆವರಣದಲ್ಲಿ ಆಯೋಜಿಸಿರುವ 19 ನೆಯ ಸಂಸ್ಕೃತಿ-ಸಂಸ್ಕಾರ ಶಿಬಿರ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ನಮ್ಮ ಮಕ್ಕಳಿಗೆ ಮನೆ ಮತ್ತು ಶಾಲೆಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿ-ಸಂಸ್ಕಾರಗಳ ಶಿಕ್ಷಣ ದೊರೆಯದಾಗಿದೆ. ಇಂದಿನ ಮಕ್ಕಳು ನಮಗಿಂತಲೂ ಹೆಚ್ಚು ಬುದ್ಧಿವಂತರಿರುವರು, ಇವರಿಗೆ ಶಿಕ್ಷಣ ಕಲಿಕೆ ಜತೆಯಲ್ಲಿ ಉತ್ತಮ ಆಚಾರ-ವಿಚಾರ, ಆಹಾರ-ವಿಹಾರ, ನಡೆ-ನುಡಿ ರೂಢಿಸಿದರೆ ಅವರು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಬೆಳೆಯುವರೆಂದು ಹೇಳಿದರು.

ಸಮಿತಿಯ ಕಾರ್ಯದರ್ಶಿ ಪ್ರಣವ ವಾರಕರ ಮಾತನಾಡಿ, ಸಂಸ್ಕೃತಿ-ಸಂಸ್ಕಾರ ಶಿಬಿರ ಎಂಬ ಹೆಸರಿನಲ್ಲಿಯೇ ಒಂದು ಹೊಸತನ ಮತ್ತು ವಿಶೇಷತೆ ಇರುವದು. ಶಿಬಿರದಲ್ಲಿ ಯೋಗಾಭ್ಯಾಸ, ಭಾರತೀಯ ಆಟೋಟ, ವ್ಯಕ್ತಿತ್ವ ವಿಕಸನ, ವಚನ ಸಂಗೀತ, ಮನೋಲ್ಲಾಸ ಇನ್ನಿತರೆ ವಿಷಯಗಳ ತರಬೇತಿ ನೀಡಲಾಗುವದೆಂದು ಎಂಬ ವಿಷಯವನ್ನು ಶಿಬಿರದ ಸಂಯೋಜಕರಿಂದ ತಿಳಿದು ಸಂತೋಷವಾಯಿತು ಎಂದರು.

ನಿವೃತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ, ಹೊಂಬಳ ಸರ್ಕಾರಿ ಪಿ.ಯು.ಕಾಲೇಜ ಉಪನ್ಯಾಸಕ ಹನಮಂತಗೌಡ ಬಿ.ಗೌಡರ, ವಿಜಯಲಕ್ಷ್ಮೀ ಮೇಕಳಿ ಹಾಜರಿದ್ದರು. ಶಿಬಿರ ಶಿಕ್ಷಕಿ ಸುನಂದಾ ಜ್ಯಾನೋಪಂತರ ಪ್ರಾರ್ಥಿಸಿದರು.

ಶಿಬಿರ ಶಿಕ್ಷಕ ಚೇತನ ಚುಂಚಾ ಸ್ವಾಗತಿಸಿದರು. ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಡಾವಣಗೇರಿ ವಂದಿಸಿದರು. ಬಸವೇಶ್ವರ ಪ್ರಾರ್ಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಶಿಬಿರದ ಸಹ ಸಂಯೋಜಕ ಎಸ್.ಎಂ. ಬುರಡಿ ನಿರೂಪಿಸಿದರು.