ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ಕುಮಟಾ

ಪ್ರತಿಯೊಂದು ಇಲಾಖೆ ಕಚೇರಿ ಹಾಗೂ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆಯಾ ಕಚೇರಿ ಅಧಿಕಾರಿ, ಸಿಬ್ಬಂದಿ ಜವಾಬ್ದಾರಿ. ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆ ಹಾಗೂ ಗ್ರಾಮೀಣ ಭಾಗದಲ್ಲಿ ಪಂಚಾಯಿತಿಗಳು ಗಟಾರ ಸಹಿತ ಇತರ ಸ್ವಚ್ಛತೆಯನ್ನು ಸದಾ ಕಾಪಾಡಿಕೊಳ್ಳಬೇಕು. ಮೊದಲು ನಾವು ಪರಿಸರವನ್ನು ಸ್ವಚ್ಛವಾಗಿಟ್ಟರೆ ಸಾರ್ವಜನಿಕರಲ್ಲೂ ಸ್ವಚ್ಛತೆಯ ಜಾಗೃತಿ ಮೂಡುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ತಾಲೂಕು ಸೌಧದಲ್ಲಿ ಸ್ವಚ್ಛತೆಯ ಕುರಿತು ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ವಿಶೇಷವಾಗಿ ಚಿಕನ್ ಸೆಂಟರ್, ಮೀನು ಮಾರಾಟದ ಅಂಗಡಿಗಳಲ್ಲಿ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇ ಮಾಡುವಂತೆ ನಿಗಾವಹಿಸಬೇಕು. ವಾರದೊಳಗೆ ಗಟಾರ ಮತ್ತು ಇತರ ಸ್ವಚ್ಛತೆ ಕಾಮಗಾರಿ ಸಂಪೂರ್ಣವಾಗಿ ಮಾಡಿ ಮುಗಿಸಬೇಕು. ಸ್ವಚ್ಛತೆ ಹೇಗಿರಬೇಕೆಂದರೆ ಸಾರ್ವಜನಿಕರಿಗೂ ಕಸ ಎಸೆಯುವುದಕ್ಕೆ ಹಿಂಜರಿಕೆ ಉಂಟಾಗುವಂತಿರಬೇಕು. ಹಾಗಾದಾಗ ಮಾತ್ರ ಅಧಿಕಾರಿಗಳು ಕಸ ಎಸೆಯುವವರ ಮೇಲೆ ದಿಟ್ಟ ಕ್ರಮ ಕೈಗೊಳ್ಳಲು ನೈತಿಕಶಕ್ತಿ ಬರುತ್ತದೆ ಎಂದರು.


ಪೊಲೀಸ್ ಠಾಣೆ ಮತ್ತು ಅವರ ವಸತಿ ಗೃಹಗಳು, ಬಿಇಒ ಕಚೇರಿ, ಶಿಕ್ಷಣ ಇಲಾಖೆಯ ಕಟ್ಟಡಗಳು, ಬಸ್ ನಿಲ್ದಾಣಗಳನ್ನು ಸಂಬಂಧಪಟ್ಟ ಇಲಾಖೆಯವರು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪಟ್ಟಣದಲ್ಲಿ ಪುರಸಭೆಯವರು ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ ಕ್ರಮವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ವಿಶೇಷ ನಿಗಾ ಬೇಕು.

ಕುಮಟಾ ಪುರಸಭೆಯಲ್ಲಿ ಬೇರೆ ಯಾವುದೇ ಇಲಾಖೆಗಿಂತ ಹೆಚ್ಚು ಸಿಬ್ಬಂದಿ ಇದ್ದಾರೆ. ಪ್ರತಿಯೊಬ್ಬರೂ ತಮ್ಮ ಕಾರ್ಯನಿರ್ವಹಣೆಯ ವಿಭಾಗದ ಕೆಲಸ ಸಮರ್ಪಕವಾಗಿ ಮಾಡಿದರೆ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುತ್ತದೆ ಎಂದು ಮುಖ್ಯಾಧಿಕಾರಿಗೆ ಹೇಳಿದರು.

ತಾಲೂಕು ಪಂಚಾಯಿತಿ ಅಡಿಯಲ್ಲಿ ವಾರದೊಳಗೆ ಕುಮಟಾ ಸುತ್ತಮುತ್ತಲಿನ ಪಂಚಾಯಿತಿಗಳಾದ ದಿವಗಿ, ವಾಲಗಳ್ಳಿ, ಹೊಲನಗದ್ದೆ, ಕೂಜಳ್ಳಿ, ಬಾಡ, ಕಲಭಾಗ ಪಂಚಾಯಿತಿ ಕಾರ್ಯಾಲಯ ಮತ್ತು ಆವರಣ ಸ್ವಚ್ಛಗೊಳಿಸುವಂತೆ ಸೂಚಿಸಿದರು. ಗೋಕರ್ಣದಲ್ಲಿ ಕಸ ವಿಲೇವಾರಿ ಘಟಕದಲ್ಲಿ ಪ್ರಸ್ತುತ ಏನು ಕೆಲಸ ನಡೆಯುತ್ತಿದೆ ಎಂಬ ಬಗ್ಗೆ ಕೂಡಲೇ ವಿಡಿಯೋ ಮಾಡಿ ಕಳುಹಿಸುವಂತೆ ಪಿಡಿಒಗೆ ಸೂಚಿಸಲು ತಾಪಂ ಸಹಾಯಕ ಆಡಳಿತಾಧಿಕಾರಿ ನಾಗರಾಜ ಶೆಟ್ಟಿ ಅವರಿಗೆ ತಿಳಿಸಿದರು.

ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ, ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ, ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಸಿಪಿಐ ಯೋಗೀಶ ಕೆ.ಎಂ., ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಡಿಪೋ ಮ್ಯಾನೇಜರ್ ವಿನಾಯಕ ಭಂಡಾರಿ, ಮೀನುಗಾರಿಕಾ ಇಲಾಖೆಯ ರುದ್ರಗೌಡ ಪಾಟೀಲ, ಬಿಇಒ ಉದಯ ನಾಯ್ಕ ಇನ್ನಿತರರು ಇದ್ದರು.