ಮೇಕೆದಾಟುಗೆ ತಡೆ ಸ್ಟಾಲಿನ್‌ ಹೇಳಿಕೆಗೆ ಸಿಎಂ ಉತ್ತರಿಸಲಿ: ಕೋಡಿಹಳ್ಳಿ ಚಂದ್ರಶೇಖರ್‌

| Published : Mar 24 2024, 01:36 AM IST / Updated: Mar 24 2024, 01:30 PM IST

ಮೇಕೆದಾಟುಗೆ ತಡೆ ಸ್ಟಾಲಿನ್‌ ಹೇಳಿಕೆಗೆ ಸಿಎಂ ಉತ್ತರಿಸಲಿ: ಕೋಡಿಹಳ್ಳಿ ಚಂದ್ರಶೇಖರ್‌
Share this Article
  • FB
  • TW
  • Linkdin
  • Email

ಸಾರಾಂಶ

 ‘ಇಂಡಿಯಾ’ ಮೈತ್ರಿಕೂಟ ಜಯಗಳಿಸಿದರೆ ಕರ್ನಾಟಕದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ತಮಿಳುನಾಡಿನ ಡಿಎಂಕೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಬೇಕು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಜಯಗಳಿಸಿದರೆ ಕರ್ನಾಟಕದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ತಮಿಳುನಾಡಿನ ಡಿಎಂಕೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಬೇಕು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಭಗತ್‌ ಸಿಂಗ್‌, ರಾಜಗುರು ಹಾಗೂ ಸುಖದೇವ್‌ ಸಿಂಗ್‌ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಅವರು ಇಂಡಿಯಾ ಕೂಟ ಜಯಗಳಿಸಿದರೆ ಕರ್ನಾಟಕದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷವಾದರೂ ಇನ್ನೂ ರೈತರು ಬೆಳೆದ ಎಲ್ಲ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿಲ್ಲ. ಇನ್ನೂ ಎಷ್ಟು ವರ್ಷ ರೈತರನ್ನು ಮೋಸಗೊಳಿಸುತ್ತೀರಿ. 

ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಅವರು 2022 ರಲ್ಲೇ ಭರವಸೆ ನೀಡಿದ್ದರು. ರಾಜ್ಯದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿದ್ದರೂ ಈ ಬಗ್ಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತರಾಟೆ ತೆಗೆದುಕೊಂಡರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಭಗತ್‌ ಸಿಂಗ್‌, ರಾಜಗುರು ಹಾಗೂ ಸುಖದೇವ್‌ ಸಿಂಗ್‌ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಮತ್ತಿತರರು ಪಾಲ್ಗೊಂಡಿದ್ದರು.