ಸಾರಾಂಶ
ವಾಲ್ಮೀಕಿ ಹಾಗೂ ಮೈಸೂರು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರವಾಗಿ ಭಾಗಿಯಾಗಿದ್ದಾರೆ. ಆದ್ದರಿಂದ ನೈತಕ ಹೊಣೆ ಹೊತ್ತು ಅವರು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದರು.
ಶ್ರೀರಂಗಪಟ್ಟಣ: ವಾಲ್ಮೀಕಿ ಹಾಗೂ ಮೈಸೂರು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರವಾಗಿ ಭಾಗಿಯಾಗಿದ್ದಾರೆ. ಆದ್ದರಿಂದ ನೈತಕ ಹೊಣೆ ಹೊತ್ತು ಅವರು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಅಧಿವೇಶನದಲ್ಲಿ ನಡೆದ ನಿಳುವಳಿ ಸೂಚನೆ ಬಂದಾಗ ಅದರ ಚರ್ಚೆಗೆ ಅವಕಾಶ ಕೊಡಬೇಕಿತ್ತು. ಆದರೆ, ಉತ್ತರ ಕೊಡದೆ ಪಲಾಯನ ಮಾಡಿರುವುದು ಅವರ ತಪ್ಪು ಎದ್ದು ಕಾಣುತ್ತಿದೆ. ಜನರು ಸಹ ಅದನ್ನು ಅರ್ಥ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ಜನತಾಪಾರ್ಟಿ ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಜನರು ಸಹ ಈ ಸರ್ಕಾರಕ್ಕೆ ಛೀಮಾರಿ ಹಾಕಲಿದ್ದಾರೆ ಎಂದು ಹೇಳಿದರು.
ಬಿಜೆಪಿ- ಜೆಡಿಎಸ್ ಪಕ್ಷಗಳು ಜಂಟಿಯಾಗಿ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರದ ಭ್ರಷ್ಟಾಚಾರಗಳನ್ನು ಎಳೆ ಎಳೆಯಾಗಿ ತಿಳಿಸಲು ಮುಂದಾಗಿವೆ. ಆದರೆ, ಇದಕ್ಕೆ ಪರ್‍ಯಾಯವಾಗಿ ಕಾಂಗ್ರೆಸ್ ಜನಾಭಿಪ್ರಾಯ ಸರ್ಕಾರದ ವಿರುದ್ಧವಿದೆ ಎನ್ನುವುದನ್ನು ತಪ್ಪಿಸುವ ಸಲುವಾಗಿ ಮೈಸೂರಿನಲ್ಲಿ ಜನಾಂದೋಲನ ಹೆಸರಿನಲ್ಲಿ ಬೃಹತ್ ಸಮಾವೇಶ ಮಾಡುತ್ತಿದ್ದಾರೆಯೇ ವಿನಃ ಅದರಲ್ಲಿ ಯಾವುದೇ ತಿರುಳಿಲ್ಲ ಎಂದು ದೂರಿದರು.