ಕನ್ನಡ ಶಾಲೆಗಳ ಉಳಿವಿಗೆ ಸಿಎಂ ದೃಢ ಸಂಕಲ್ಪ ಮಾಡಲಿ: ಹೊರಟ್ಟಿ

| Published : Nov 01 2024, 12:01 AM IST

ಸಾರಾಂಶ

2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಬಹುದೊಡ್ಡ ಪೆಟ್ಟು ಬೀಳುವ ಲಕ್ಷಣಗಳು ದಿನದಿಂದ ದಿನಕ್ಕೆ ಕಾಣುತ್ತಿವೆ.

ಹುಬ್ಬಳ್ಳಿ:

ದಿನದಿಂದ ದಿನಕ್ಕೆ ಕನ್ನಡ ಶಾಲೆಗಳ ಸಂಖ್ಯೆ ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ ಅವುಗಳ ಉಳಿವಿಗಾಗಿ ಮುಖ್ಯಮಂತ್ರಿ ದೃಢ ಸಂಕಲ್ಪ ಮಾಡಬೇಕು. ಆ ಮೂಲಕ 69ನೇ ಕನ್ನಡ ರಾಜ್ಯೋತ್ಸವಕ್ಕೊಂದು ಅರ್ಥಪೂರ್ಣ ಮಹತ್ವ ಬಂದಂತಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಬಹುದೊಡ್ಡ ಪೆಟ್ಟು ಬೀಳುವ ಲಕ್ಷಣಗಳು ದಿನದಿಂದ ದಿನಕ್ಕೆ ಕಾಣುತ್ತಿವೆ. ಕನ್ನಡ ಕಾವಲು ಸಮಿತಿಯಿಂದಲೇ ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸಿದ ಮುಖ್ಯಮಂತ್ರಿಗಳು ಒಬ್ಬ ಕನ್ನಡದ ಕಟ್ಟಾಳು. 69ನೇ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಎಲ್ಲೆಡೆ ನ. 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆಯ ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಆದ್ಯ ಕೆಲಸ. ಮಾತೃ ಭಾಷೆಯ ಜಾಗೃತಿಗಾಗಿ ಸಂಘ- ಸಂಸ್ಥೆಗಳು ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ತುಂಬುತ್ತಿವೆ ಎಂದು ಹೇಳಿದ್ದಾರೆ.

ಈ ತಿಂಗಳಲ್ಲದೇ ವರ್ಷದುದ್ದಕ್ಕೂ ಕನ್ನಡ ಭಾಷೆಯನ್ನು ಗಟ್ಟಿಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು, ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಘಟನೆಗಳು ಕೆಲಸ ಮಾಡುತ್ತಾ ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಆದಾಗ್ಯೂ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ನಾವೆಲ್ಲರೂ ನಮ್ಮ ಮಾತೃಭಾಷೆಯಾದ ಕನ್ನಡಕ್ಕೆ ಆದ್ಯತೆ ನೀಡಬೇಕು. ಮಾತೃ ಭಾಷೆ ಕನ್ನಡವಾಗಿದ್ದರೂ ಮಕ್ಕಳು ನಿರರ್ಗಳವಾಗಿ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿಲ್ಲ. ನಾವು ಮಾತನಾಡುವ ಪ್ರತಿ ಶಬ್ದಗಳಲ್ಲಿಯೂ ಅನ್ಯ ಭಾಷೆಯ ಪದ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ.

1995ರಿಂದ ಆರಂಭವಾದ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರು ಕಳೆದ ಎರಡೂವರೆ ದಶಕಗಳಿಂದ ತಮ್ಮ ಬದುಕನ್ನು ಪಣಕ್ಕಿಟ್ಟು ಕನ್ನಡ ಶಾಲೆಯ ಉಳಿವಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆ ಶಿಕ್ಷಕರು ಹಲವಾರು ವರ್ಷಗಳಿಂದ ತಮ್ಮ ಜೀವನದ ಭದ್ರತೆಗಾಗಿ ಕನ್ನಡ ಶಾಲೆಗಳಿಗೆ ಅನುದಾನ ನೀಡಿ ಎಂದು ಹಲವಾರು ಬಾರಿ ಬೀದಿಗಿಳಿದು ಹೋರಾಟ ಮಾಡುತ್ತಾ ಬಂದಿದ್ದಾರೆ. ಇಂತಹ ಶಾಲೆಗಳಿಂದಲೇ ಮಾತೃಭಾಷೆ ಇಂದಿಗೂ ಜೀವಂತವಾಗಿದೆ. ಈ ಶಿಕ್ಷಕರು ಇಂದು ನೊಂದು ಬೇಸತ್ತು 69ನೇ ಕನ್ನಡ ರಾಜ್ಯೋತ್ಸವವನ್ನು ಕರಾಳದಿನವನ್ನಾಗಿ ಆಚರಿಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಇಂತಹ ಶಾಲೆಗಳನ್ನು ಉಳಿಸುವ ಮೂಲಕ ಮುಖ್ಯಮಂತ್ರಿಗಳು ದೃಢ ಸಂಕಲ್ಪ ಮಾಡಬೇಕಿದೆ. ಈ ನಿಟ್ಟಿನತ್ತ ಮುಖ್ಯಮಂತ್ರಿಗಳು ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.