ಸಾರಾಂಶ
- ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕೊಪ್ಪಳಪ್ರತಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಸ್ವಂತ ಕಟ್ಟಡ ಹೊಂದಬೇಕು ಎನ್ನುವುದು ಕೆಪಿಸಿಸಿ ಆದೇಶವೂ ಆಗಿರುವುದರಿಂದ ಕೊಪ್ಪಳದಲ್ಲಿಯೂ ಪಕ್ಷದ ಕಾರ್ಯಾಲಯಕ್ಕೆ ಸ್ವಂತ ಕಟ್ಟಡವಾಗಲಿ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ನಗರದ ಡಿಸಿ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಈಗ ಉದ್ಘಾಟನೆ ಮಾಡಿರುವುದು ಬಾಡಿಗೆ ಕಟ್ಟಡವಾಗಿದೆ. ಸಾಧ್ಯವಾದಷ್ಟು ಬೇಗನೆ ಸ್ವಂತ ಜಾಗೆಯನ್ನು ಗುರುತಿಸಿ, ಸ್ವಂತ ಕಟ್ಟಡ ಹೊಂದಬೇಕಾಗಿದ್ದು, ನಾನು ಸಹ ಒಂದಷ್ಟು ಸಹಾಯ ಮಾಡುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಜಿಲ್ಲಾ ಕಚೇರಿಗೆ ಸ್ವಂತ ಕಟ್ಟಡಕ್ಕಾಗಿ ಜಾಗ ನೋಡಿದ್ದೇವೆ. ಜಾಗೆ ಖರೀದಿ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶೀಘ್ರದಲ್ಲಿಯೇ ನಿರ್ಮಾಣ ಪ್ರಾರಂಭಿಸಲಾಗುವುದು ಎಂದರು.ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಕಟ್ಟಡ ನಿರ್ಮಾಣವನ್ನು ಶೀಘ್ರದಲ್ಲಿಯೇ ಮಾಡಬೇಕಾಗಿದೆ. ಇದಕ್ಕಾಗಿ ಪಕ್ಷದ ಮುಖಂಡರೆಲ್ಲರೂ ಸೇರಿ ತೀರ್ಮಾನ ಮಾಡೋಣ ಎಂದರು.
ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪೂರ, ಸಂಸದ ರಾಜಶೇಖರ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಮಾಜಿ ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ರೆಡ್ಡಿ ಗಲಿಬಿ, ಮುಖಂಡರಾದ ಯಂಕಣ್ಣ ಯರಾಶಿ, ಮಾಲತಿ ನಾಯಕ, ಎಂ.ಆರ್. ವೆಂಕಟೇಶ, ಶಾಮಿದ್ ಮನಿಯಾರ್, ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡು ಚೆಂಡೂರು, ಗವಿಸಿದ್ದನಗೌಡ ಪಾಟೀಲ್, ಗವಿಸಿದ್ದಪ್ಪ ಮುದಗಲ್, ಅಕ್ಬರ್ ಪಲ್ಟನ್ ಇದ್ದರು.ಜಾತಿ ಭೇದ ಮಾಡಿದರೆ ಅವರ ಮಕ್ಕಳು ಹುಳಬಿದ್ದು ಸಾಯುತ್ತಾರೆ:ನಾನು ಎಂದಿಗೂ ಜಾತಿ ಭೇದ ಮಾಡಿಲ್ಲ, ಮಾಡೋದು ಇಲ್ಲ. ಹಾಗೊಂದು ವೇಳೆ ನಾನು ಸೇರಿದಂತೆ ಯಾರೇ ಜಾತಿ ಭೇದ ಮಾಡಿದರೆ ಅವರ ಮಕ್ಕಳು ಹುಳು ಬಿದ್ದು ಸಾಯುತ್ತಾರೆ. ನಾನು ನನ್ನ ಮೊಮ್ಮಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ. ಜಾತಿ ಮಾಡಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.ನಗರದ ಸಾಹಿತ್ಯ ಭವನದಲ್ಲಿ ಪೌರಕಾರ್ಮಿಕರಿಗೆ ಮತ್ತು ಪತ್ರಕರ್ತರಿಗೆ ನಿವೇಶನ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ರಾಜಕೀಯದಲ್ಲಿ ಇರುವವರು ಜಾತಿ ಮಾಡಬಾರದು. ಜಾತಿ ಮಾಡಬೇಕಾಗಿದ್ದರೆ ರಾಜಕೀಯಕ್ಕೆ ಬರಬಾರದು ಎಂದು ಹೇಳಿದರು.
ಬಿಜೆಪಿಯವರು ಮಾತ್ತೆತ್ತಿದರೆ ಜಾತಿ ಜಾತಿ ಎನ್ನುತ್ತಾರೆ. ಜಾತಿ, ಧರ್ಮದ ಹೆಸರಿನಲ್ಲಿಯೇ ಅವರು ಮತ ಕೇಳುತ್ತಾರೆ. ಅಭಿವೃದ್ಧಿ ಮಾಡದೆ ಇರುವ ಅವರು ಇಂಥ ಜಾತಿ, ಧರ್ಮದ ಹೆಸರಿನಲ್ಲಿಯೇ ಅಧಿಕಾರಕ್ಕೆ ಬರಬೇಕು, ಖುರ್ಚಿಯಲ್ಲಿ ಕೂಡಬೇಕು ಎನ್ನುತ್ತಾರೆ. ಅಷ್ಟೇ ಅಲ್ಲ ಅವರು ಅಧಿಕಾರಕ್ಕೆ ಬಂದರೆ ಹಿಂದೂಗಳಿಗೂ ಏನು ಮಾಡುವುದಿಲ್ಲ ಎಂದರು.ಹೀಗಾಗಿ ನಾನು ಇದುವರೆಗೂ ಜಾತಿ ಮಾಡಿಲ್ಲ. ಮಾಡುವುದು ಇಲ್ಲ, ವೇದಿಕೆಯ ಮೇಲೆ ಕುಳಿತಿದ್ದ ರಾಯರಡ್ಡಿ ಸಾಹೇಬ ನನಗೆ ತಂದೆ ಇದ್ದಂತೆ. ಅವರ ಎದುರಿಗೆ ಹೇಳುತ್ತೇನೆ. ನನ್ನ ಮೊಮ್ಮಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಜಾತಿ ಮಾಡುವುದಿಲ್ಲ ಎಂದರು.ಜಾತಿ ಭೇದ ಮಾಡಿದರೆ ಅವರ ಮಕ್ಕಳು ಹುಳುಬಿದ್ದು ಸಾಯುತ್ತಾರೆ. ನಮ್ಮ ಧರ್ಮದಲ್ಲಿಯೂ ಜಾತಿ ಮಾಡುವಂತೆ ಹೇಳಿಲ್ಲ. ಕಷ್ಟದಲ್ಲಿರುವ ಯಾವುದೇ ಜಾತಿಯವರೆಗೆ ಸಹಾಯ ಮಾಡುವಂತೆ ನಮ್ಮ ಧರ್ಮ ಹೇಳುತ್ತದೆ ಎಂದರು.ಕೇಂದ್ರ ಸರ್ಕಾರ ಬಡವರ ಮೇಲೆ ಜಿಎಸ್ಟಿ ಹಾಕುತ್ತದೆ. ಪ್ರಧಾನಮಂತ್ರಿ ವಸತಿ ಯೋಜನೆಯಲ್ಲಿ ನೀಡುವ ಸಬ್ಸಿಡಿಯನ್ನು ಜಿಎಸ್ಟಿ ಮೂಲಕ ವಾಪಸ್ಸು ಪಡೆಯುತ್ತದೆ ಎಂದು ಕಿಡಿಕಾರಿದರು.