ಸಾರಾಂಶ
ನಾವು ಯಾವುದೇ ಆಸೆ- ಆಕಾಂಕ್ಷೆಗಳಿಗೆ ಈ ಸೇವೆ ಮಾಡುತ್ತಿಲ್ಲ. ನಾವು ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಕರ್ನಾಟಕದ ಮೂಲೆ ಮೂಲೆಯಿಂದ ಕರೆಸಿ, ತತ್ವಪದ ಮೇಳ ಮಾಡುವುದು ಒಂದು ಸವಾಲಿನ ಕೆಲಸವೇ ಸರಿ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ದಲಿತರ, ಬಡವರು ಮುಖ್ಯವಾಹಿನಿಗೆ ಬರಬೇಕು, ನನ್ನ ಉಸಿರು ಇರುವವರೆಗೂ ಈ ಆದಿ ಜಾಂಬವ ಮಠಕ್ಕೆ ಸಂಪೂರ್ಣ ಸಹಕಾರ ಇರುತ್ತದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಬಿದಲೋಟಿ ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ತತ್ವಪದ ಮೇಳ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ೧೨ನೇ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಈ ದೇಶದಲ್ಲಿ ದಲಿತರು, ಹಿಂದುಳಿದವರು ಅಭಿವೃದ್ಧಿಯಾಗಬೇಕಿದ್ದು, ಇವರು ಮುಖ್ಯ ವಾಹಿನಿಗೆ ಬರಬೇಕಾದರೆ ಇಂತಹ ಮಠಗಳಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರವೂ ಇಂತಹ ಸಣ್ಣ ಸಣ್ಣ ಮಠಗಳಿಗೆ ಅನುದಾನ ನೀಡಿ ಮಠಗಳ ಅಭಿವೃದ್ಧಿ ಮಾಡಲು ಗಮನಹರಿಸಬೇಕು. ಆಧ್ಯಾತ್ಮಿಕ ಚಿಂತಕರನ್ನು ಬೆಂಬಲಿಸುವ ಮೂಲಕ ಸಹಕಾರ ನೀಡಬೇಕು ಹಾಗೂ ಗುರುವನ್ನು ಸ್ಮರಣೆ ಮಾಡುತ್ತಾ ಗುರುವಿನ ಮಾರ್ಗದರ್ಶನ ಪಾಲಿಸಿದರೆ ಅವರಿಗೆ ಮೋಕ್ಷ ದೊರೆಯುತ್ತದೆ. ಕರ್ನಾಟಕದಲ್ಲಿನ ತತ್ವಪದಕಾರರಾದ ನೀವುಗಳೇ ನನಗೆ ನಾಗಾಸಾಧುಗಳಂತೆ ಕಾಣುತ್ತೀರಿ ಎಂದರು.ಸಾಹಿತಿ ಬಿದಲೋಟಿ ರಂಗನಾಥ್ ಮಾತನಾಡಿ, ತತ್ವಪದಗಳು ನಮಗೆ ಯಾವಾಗಲೂ ಆಧ್ಯಾತ್ಮಿಕ ಚಿಂತನೆಯ ಬೀಜವನ್ನು ಬಿತ್ತುತ್ತಾ, ನೆಲಮೂಲ ಸಂಸ್ಕೃತಿಯ ಅರಿವನ್ನು ನೀಡುತ್ತವೆ. ಸಾಹಿತ್ಯದ ತಾಯಿಬೇರು ತತ್ವಪದ. ಅವು ನಮಗೆ ಬೆಳಕಿನ ದಾರಿಯನ್ನು ಹುಡುಕಲು ಅನುವು ಮಾಡಿಕೊಳ್ಳುತ್ತವೆ ಎಂದು ಹೇಳಿದರು.
ಆದಿ ಜಾಂಬವ ಮಠದ ಅಧ್ಯಕ್ಷ ಶ್ರೀ ಮರಿರಂಗಯ್ಯ ಸ್ವಾಮೀಜಿ ಮಾತನಾಡಿ. ನಾವು ಯಾವುದೇ ಆಸೆ- ಆಕಾಂಕ್ಷೆಗಳಿಗೆ ಈ ಸೇವೆ ಮಾಡುತ್ತಿಲ್ಲ. ನಾವು ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಕರ್ನಾಟಕದ ಮೂಲೆ ಮೂಲೆಯಿಂದ ಕರೆಸಿ, ತತ್ವಪದ ಮೇಳ ಮಾಡುವುದು ಒಂದು ಸವಾಲಿನ ಕೆಲಸವೇ ಸರಿ ಎಂದು ತಿಳಿಸಿದರು.ತತ್ವಪದಕಾರ ಕಲ್ಲಳ್ಳಿ ರಾಮಣ್ಣ ಮಾತನಾಡಿ, ಮರಿ ರಂಗಯ್ಯ ಸ್ವಾಮೀಜಿ ಮಠಕ್ಕೆ ನೂರಾರು ಶರಣರನ್ನು ಕರೆಸಿ, ಗೌರವಿಸಿ ಕಳಿಸುವ ಇವರ ಶ್ರಮ ಶ್ಲಾಘನೀಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜನಧ್ವನಿ ಪತ್ರಿಕೆ ಸಂಪಾದಕ ಬಿ.ಎಂ. ಮಂಜುನಾಥ್. ಕಾರ್ತಿಕ್. ಬಿ.ಎಂ., ಉದ್ಯಮಿ ಪ್ರಮೋದ್ ಗೌಡ, ಶರಣ ತಿಮ್ಮಯ್ಯ. ಕಾಡಾರ್ಯ ಸ್ವಾಮೀಜಿ, ಸಿದ್ಧಾರೂಢ ಸ್ವಾಮೀಜಿ, ಸಿದ್ದಗಂಗಮ್ಮ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು. ತತ್ವಪದಕಾರರಿಗೆ ಆದಿ ಜಾಂಬವ ಮಠದ ವತಿಯಿಂದ ವಸ್ತ್ರ ವಿತರಣೆ ಮಾಡಲಾಯಿತು.