ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಯುಪಿಎಸ್‌ಸಿ ಪಟ್ಟಿಯಲ್ಲಿ ದಾವಣಗೆರೆ ಸಂಕಲ್ಪದಲ್ಲಿ ತರಬೇತಿ ಪಡೆದವರ ಹೆಸರು ರಾರಾಜಿಸಬೇಕು, ಇಲ್ಲಿಂದ ಹೆಚ್ಚು ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗುವಂತಹ ಸಾಧನೆ ಹೊರ ಹೊಮ್ಮಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕರೆ ನೀಡಿದರು.ನಗರದ ಬಿಐಇಟಿ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ದಾವಣಗೆರೆ ವಿಶ್ವವಿದ್ಯಾಲಯ, ಎಸ್.ಎಸ್.ಕೇರ್ ಟ್ರಸ್ಟ್ ಹಾಗೂ ಐಎಎಸ್ ಬಾಬಾ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ಆರಂಭಿಸಿದ ಸಂಕಲ್ಪ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಶಿಕ್ಷಣ ಅತೀ ಮುಖ್ಯವಾಗಿದ್ದು, ಶಿಕ್ಷಣದಿಂದ ಮಾತ್ರ ಸಮಾನತೆ, ಅಭಿವೃದ್ಧಿ ಕಡೆಗೆ ಹೋಗಲು ಸಾಧ್ಯ. ಜನಪ್ರತಿನಿಧಿಯಾಗಿಯೂ ಸಮಾಜ ಸುಧಾರಣೆ ಮಾಡಲು ಸಾಧ್ಯವಿದೆ. ಆಡಳಿತಾತ್ಮಕ ಸೇವೆಗೆ ಸೇರ್ಪಡೆಯಾದಾಗ ಸಾಂವಿಧಾನಿಕ ಅಧಿಕಾರ ಸಿಕ್ಕಾಗ ಮಾತೃಭೂಮಿ ಋಣ ತೀರಿಸಲು ಸಾಧ್ಯವಾಗುತ್ತದೆ. ಈ ಸ್ಥಾನದಲ್ಲಿ ಇದ್ದಾಗ ಮಾತ್ರ ಸಮಾಜದ ಎಲ್ಲಾ ಕ್ಷೇತ್ರ, ಜನ ಸಮುದಾಯದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.ಬದಲಾವಣೆಗೆ ಎಲ್ಲರೂ ಕೈಜೋಡಿಸಬೇಕು. ಯಾವುದೂ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಅದಕ್ಕಾಗಿ ಕಷ್ಟಪಡಬೇಕು. ಸಾಮಾನ್ಯ ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ಶೇ.70ಕ್ಕೂ ಅದಿಕ ಸಾಮಾನ್ಯ ಜ್ಞಾನದಲ್ಲಿ ಪಡೆದ ಅಂಕಗಳು ಆಯ್ಕೆಗೆ ಅನುಕೂಲವಾಗುತ್ತವೆ. ಸಾಮಾನ್ಯ ಜ್ಞಾನದಲ್ಲಿ ಪರಿಣಿತಿ ಪಡೆದರೆ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ಉತ್ತಮ ಮತ್ತು ವಿಶಿಷ್ಟ ಆಲೋಚನೆ ಹೊಂದಿದವರಿಗೆ ಮಾತ್ರ ಹೆಚ್ಚು ಅಂಕ ಸಿಗುತ್ತದೆ. ಪ್ರಚಲಿತ ವಿದ್ಯಾಮಾನಗಳ ಬಗ್ಗೆಯೂ ಗಮನ ಹರಿಸಬೇಕು. ಪಠ್ಯ ಮತ್ತು ಪ್ರಚಲಿತ ವಿದ್ಯಾಮಾನದ ಮೇಲೆ ನಿರಂತರ ಗಮನವಿರಲಿ ಎಂದು ಅವರು ಕಿವಿಮಾತು ಹೇಳಿದರು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಲಕ್ಷ್ಯಕ್ಕೆ ಅನುಗುಣವಾಗಿ ಆಲೋಚಿಸಬೇಕು. ನಿತ್ಯವೂ ಕನ್ನಡಿಯಲ್ಲಿ ನಿಮ್ಮ ಕಣ್ಣಲ್ಲಿ ಕಣ್ಣಟ್ಟು, ಯಶಸ್ಸು ಪಡೆಯುತ್ತೇನೆಂಬ ಸಂಕಲ್ಪ ಮಾಡಿ. ಸಮಯ ನಿರ್ವಹಣೆ, ಸಮಯದ ಮೌಲ್ಯ ಅರಿತಾಗ ಬದುಕಿನಲ್ಲಿ ಓದಿ, ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ನಾಲ್ಕೈದು ವರ್ಷದ ಹಿಂದೆ ಎಸ್ಸೆಸ್ ಕೇರ್ ಟ್ರಸ್ಟ್ ಡಯಾಲಿಸಿಸ್ ಸೇವೆ ಶುರು ಮಾಡಿದ್ದು, ಬಡವರಿಗೆ ಇದರಿಂದ ಅನುಕೂಲವಾಗುತ್ತಿದೆ. ಇದಕ್ಕಾಗಿ 10 ಕೋಟಿ ರು. ಠೇವಣಿ ಇಟ್ಟು, ಸೇವೆ ಶುರು ಮಾಡಿದ್ದೆವು. ಈಗ ಠೇವಣಿ 25 ಕೋಟಿಗೆ ಏರಿಕೆಯಾಗಿದೆ. ಇನ್ನೂ ಹೆಚ್ಚು ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲೆಂದು ಸಂಕಲ್ಪ ಐಎಎಸ್ ಕೇಂದ್ರ ಸ್ಥಾಪಿಸಲಾಗಿದೆ ಎಂದರು.ಸಂಸದೆ, ಎಸ್ಸೆಸ್ ಕೇರ್ ಟ್ರಸ್ಟ್‌ನ ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಓ ಗಿತ್ತೆ ಮಾಧವ ವಿಠ್ಠಲರಾವ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಐಎಎಸ್ ಬಾಬಾ ಸಂಸ್ಥಾಪಕ ಎಸ್.ಮೋಹನಕುಮಾರ, ಧವನ್ ಕಾಲೇಜಿನ ಕಕ್ಕರಗೊಳ್ಳದ ವೀರೇಶ ಪಟೇಲ್ ಇತರರು ಇದ್ದರು.
ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯದಲ್ಲಿ ಇಂತಹ ತರಬೇತಿ ಕೇಂದ್ರ ಪ್ರಾರಂಭವಾಗಿದ್ದು ದಾವಣಗೆರೆಯಲ್ಲಿ ಮಾತ್ರ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಾಲಕರು ಪ್ರೇರಣೆ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ಆರಂಭಿಸಿದ ಸಂಕಲ್ಪ ಕೇಂದ್ರ ಭವಿಷ್ಯದಲ್ಲಿ ದಾವಣಗೆರೆ ಸೇರಿದಂತೆ ನೆರೆ ಜಿಲ್ಲೆ ಮಕ್ಕಳಿಗೆ ಭವಿಷ್ಯಕ್ಕೆ ಆಸರೆಯಾಗಲಿದೆ.ಪ್ರೊ.ಬಿ.ಡಿ.ಕುಂಬಾರ, ಕುಲಪತಿ, ದಾವಿವಿ
ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಂಡ ನಂತರ ದಾವಣಗೆರೆಯಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಪ್ರಾಮಾಣಿಕ ಸೇವೆ ಮಾಡಿದರೆ ಸಮಾಜಕ್ಕೆ ಒಳಿತಾಗುತ್ತದೆ. ತರಬೇತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವೆ.ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವ