ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಕಾನೂನಾತ್ಮಕವಾಗಿ ಹೇಗೆ ಬಗೆಹರಿಸಿಕೊಳ್ಳಬೇಕು ಎನ್ನುವ ಕುರಿತು ಅಧಿಕಾರಿ ವರ್ಗದವರು ಶ್ರೀಸಾಮಾನ್ಯರಿಗೆ ತಿಳಿಸಬೇಕು.
ಶಿರಹಟ್ಟಿ: ಸಮಾಜದಲ್ಲಿನ ಬೇರೆ ಬೇರೆ ವರ್ಗಗಳು ಅನ್ಯೋನ್ಯತೆಯಿಂದ ಬೆಳೆಯಬೇಕಾದರೆ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಗಬೇಕು. ಜನಸಾಮಾನ್ಯರ ಬೇಡಿಕೆಯಂತೆ ರಾಜ್ಯ ಸರ್ಕಾರದ ಆಯವ್ಯಯ ರೂಪಿತಗೊಳ್ಳಬೇಕು ಎಂದು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ತಿಳಿಸಿದರು.ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ನಡೆದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಹಾಗೂ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳ, ಗ್ರಾಪಂ ಪಿಡಿಒಗಳ ಸಭೆ, ಜನರ ಪಾಲ್ಗೊಳ್ಳುವಿಕೆಯಿಂದ ೨೦೨೭- ೨೮ನೇ ಸಾಲಿನ ಯೋಜನೆಯನ್ನು ಅರ್ಥಪೂರ್ಣವಾಗಿ ಜನಪರ ಯೋಜನೆಯನ್ನಾಗಿ ಮಾಡುವ ಕುರಿತು ಕರೆದ ಚಿಂತನ ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಕಾನೂನಾತ್ಮಕವಾಗಿ ಹೇಗೆ ಬಗೆಹರಿಸಿಕೊಳ್ಳಬೇಕು ಎನ್ನುವ ಕುರಿತು ಅಧಿಕಾರಿ ವರ್ಗದವರು ಶ್ರೀಸಾಮಾನ್ಯರಿಗೆ ತಿಳಿಸಬೇಕು. ಸ್ಥಳೀಯವಾಗಿ ಮೀಸಲಾತಿ ಆಧಾರದ ಮೇಲೆ ಇಲ್ಲಿಯವರೆಗೂ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಗ್ರಾಮಸಭೆ, ಗ್ರಾಮ ಪಂಚಾಯಿತಿಗಳಿಗೆ ಇರುವ ಅಧಿಕಾರದ ಕುರಿತು ಸಮಗ್ರವಾಗಿ ತಿಳಿಸಿಲ್ಲ. ಇನ್ನು ಮುಂದೆ ಈ ಕೆಲಸ ಆಗಬೇಕು. ಸಾಮಾನ್ಯ ಜನರ ಅಪೇಕ್ಷೆ ಅನಿಸಿಕೆಯಂತೆ ಸ್ಥಳೀಯ ಮಟ್ಟದ ಸಮಸ್ಯೆಗಳು ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅಳವಡಿಕೆಯಾಗುವ ಹಂತದಲ್ಲಿ ಗಮನ ಸೆಳೆಯಲು ಎಲ್ಲರೂ ಸಹಕರಿಸಬೇಕು ಎಂದರು.
ಗ್ರಾಮಸಭೆಗಳು ಸ್ಥಳೀಯ ಸರ್ಕಾರವಾಗಿ, ಅರ್ಥಪೂರ್ಣವಾಗಿ ಹಾಗೂ ಪರಿಣಾಮಕಾರಿಯಾಗಿ ನಡಯಬೇಕು. ಜನರು ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. ಸ್ಥಳೀಯವಾಗಿ ಇರುವ ಅಗತ್ಯ ಹಾಗೂ ಮೂಲ ಸೌಲಭ್ಯಗಳ ಬಗ್ಗೆ ಈಡಿ ರಾಜ್ಯಕ್ಕೆ ಮಾದರಿ ಆಗುವ ಹಾಗೆ ಯೋಜನೆ ರೂಪಿಸಿ ನಮ್ಮ ಗಮನಕ್ಕೆ ತಂದಲ್ಲಿ ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅಳವಡಿಕೆಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.ಸ್ಥಳೀಯ ಜನರ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಒಗ್ಗೂಡಿ ಶಾಶ್ವತ ಯೋಜನೆ ಹಮ್ಮಿಕೊಂಡಲ್ಲಿ ಇದರ ಪ್ರಯೋಜನೆ ಜನರಿಗೆ ಸಿಗಲಿದೆ. ಸಾಮಾಜಿಕ ಕಳಕಳಿ ಇದ್ದು ಸಮಾಜಕ್ಕೆ ಕೈಲಾದ ಅಳಿಲುಸೇವೆ ಮಾಡಿದರೆ ಮಾತ್ರ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಲು ಸಾಧ್ಯವಾಗುತ್ತದೆ. ಗಾಂಧೀಜಿಯವರು ದೇಶದ ಒಳಿತಿಗಾಗಿ ಸಾಕಷ್ಟು ಕನಸು ಕಂಡಿದ್ದರು. ಇದು ಇವತ್ತಿಗೂ ಸಹಕಾರಗೊಂಡಿಲ್ಲ. ಗ್ರಾಮಮಟ್ಟದಲ್ಲಿ ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ಇದು ಈಡೇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಗಾಂಧೀಜಿಯವರು ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಆದರೆ, ದೇಶದಲ್ಲಿ ಜಾತೀಯತೆ, ತಾರತಮ್ಯ ಇನ್ನೂ ಜೀವಂತವಾಗಿದೆ. ಜಾತಿ, ಕುಲ, ಧರ್ಮದ ಹೆಸರಿನಲ್ಲಿ ಭೇದಭಾವ ಮಾಡಬಾರದು. ಆಗ ಮಾತ್ರ ಗಾಂಧೀಜಿಯ ಕನಸಿನ ಸಮ ಸಮಾಜ ಕಟ್ಟಬಹುದು. ಗ್ರಾಮಗಳು ಉದ್ಧಾರವಾದರೆ ಮಾತ್ರ ದೇಶದ ಉದ್ಧಾರ ಸಾಧ್ಯ ಎಂಬುದು ಗಾಂಧೀಜಿಯ ನಂಬಿಕೆಯಾಗಿತ್ತು. ಅದರಂತೆ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಸಹೋದರತ್ವ ಭಾವನೆಯಿಂದ ಒಗ್ಗೂಡಿ ಕೆಲಸ ಮಾಡಬೇಕು ಎಂದರು.ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸುಜಾತಾ ದೊಡ್ಡಮನಿ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ ಮಾಗಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ವೀರಯ್ಯ ಮಠಪತಿ, ರಮೇಶ ನಿರ್ವಾಣಶೆಟ್ಟರ, ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ, ಎ.ಎ. ಕಂಬಾಳಿಮಠ, ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಇಒ ರಾಮಣ್ಣ ದೊಡ್ಡಮನಿ, ಇಎಸ್‌ಐ ಈರಪ್ಪ ರಿತ್ತಿ, ಪರಮೇಶ ಪರಬ, ಚೆನ್ನಪ್ಪ ಜಗಲಿ, ಡಿ.ಕೆ. ಹೊನ್ನಪ್ಪನವರ, ದೇವಪ್ಪ ಲಮಾಣಿ ಸೇರಿ ಎಲ್ಲ ಗ್ರಾಪಂ ಮಾಜಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಇದ್ದರು.