ಮಹಿಳೆಯರಲ್ಲಿ ದೃಢ ಸಂಕಲ್ಪ ಜಾಗೃತವಾಗಲಿ

| Published : Mar 09 2024, 01:37 AM IST

ಸಾರಾಂಶ

ಮಹಿಳೆಯರು ಯಾವುದೇ ಒಂದು ಕಾರ್ಯಕ್ಕೆ ಸೀಮಿತವಾಗದೆ, ವಿಶಾಲ ಚಿಂತನೆಯತ್ತ ತೆರೆದುಕೊಳ್ಳಬೇಕು. ಸಾಧನೆಗೆ ವಿವಾಹ ಎಂಬುದು ಅಡ್ಡಿಯಾಗುವುದಿಲ್ಲ, ಸಾಧಿಸುವ ಛಲ ನಮ್ಮಲ್ಲಿರಬೇಕು

ಧಾರವಾಡ: ಇಲ್ಲಿಯ ವಿವೇಕ ಗ್ರಾಮೀಣ ಜೀವನಾಧಾರ ತರಬೇತಿ ಕೇಂದ್ರ ಹಾಗೂ ಶಾರದಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸಂಸ್ಥೆಯ ಮಾಳಮಡ್ಡಿಯ ಕಚೇರಿಯಲ್ಲಿ ಶುಕ್ರವಾರ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಸಂಸ್ಥೆಯ ಧಾರವಾಡ ವಿಭಾಗದ ಕಾರ್ಯಕ್ರಮ ವ್ಯವಸ್ಥಾಪಕರಾದ ಮೌಲ್ಯ ಮಾತನಾಡಿ, ಪುರುಷರಂತೆಯೇ ಮಹಿಳೆಯರಿಗೂ ಕೂಡ ಸಮಾನ ಶಿಕ್ಷಣ, ಸಮಾನ ವೇತನ, ಸಾಮಾಜಿಕ ಗೌರವ ದೊರೆಯಬೇಕಿದೆ. ಚಂದ್ರಯಾನ -3 ರ ರೂವಾರಿಗಳಲ್ಲಿ ಒಬ್ಬರಾದ ರಿತು ಕರಿಧಾಲ್ ರವರ ಸಾಧನೆ, ಭಾರತೀಯ ಮನರಂಜನಾ ಕ್ಷೇತ್ರದ ದಿಗ್ಗಜರಾದ ಶೆಫಾಲಿ ಷಾ ಆಸ್ಕರ್ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು, ಖ್ಯಾತ ಲೇಖಕಿ ಸುಧಾ ಮೂರ್ತಿ ತಮ್ಮ ಸಾಮಾಜಿಕ ಸೇವೆಗಾಗಿ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿರುವುದು, ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಕಮಾಂಡಿಗ್ ಆಗಿ ನೇಮಕಗೊಂಡ ಆರ್.ಹರಿ ಕುಮಾರ್ ಸಾಧನೆ, ಭಾರತದ ಮೊದಲ ಮಹಿಳಾ ವಿಮಾನ ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿಯಾಗಿ ನೇಮಕಗೊಂಡ ದಿಶಾ ನಾಯಕ್ ಸಾಧನೆಯು ಮಹಿಳೆಯರಿಗೆ ಸ್ಪೂರ್ತಿ ನೀಡುವಂತಹ ನಿದರ್ಶನಗಳಾಗಿವೆ. ಇಂತಹ ಸಾಧಕರ ಜೀವನ ನಮ್ಮೆಲ್ಲರಿಗೂ ಆದರ್ಶಪ್ರಾಯ ಎಂದರು.

ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಹಿಂಜರಿಕೆ ಸ್ವಭಾವ ದೂರವಿಡಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಆತ್ಮವಿಶ್ವಾಸ ವೃದ್ಧಿಯಾಗಬೇಕು. ಮಹಿಳೆಯರು ಯಾವುದೇ ಒಂದು ಕಾರ್ಯಕ್ಕೆ ಸೀಮಿತವಾಗದೆ, ವಿಶಾಲ ಚಿಂತನೆಯತ್ತ ತೆರೆದುಕೊಳ್ಳಬೇಕು. ಸಾಧನೆಗೆ ವಿವಾಹ ಎಂಬುದು ಅಡ್ಡಿಯಾಗುವುದಿಲ್ಲ, ಸಾಧಿಸುವ ಛಲ ನಮ್ಮಲ್ಲಿರಬೇಕು. ಸಮಸ್ಯೆ ಮೀರಿ ಬದುಕುವ ಸಾಮರ್ಥ್ಯ ಎಲ್ಲರಲ್ಲೂ ಇದೆ. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಆತ್ಮಸ್ಥೈರ್ಯ ವೃದ್ಧಿಸಿಕೊಂಡು ದಾಪುಗಾಲು ಇರಿಸಬೇಕಾಗಿರುವುದು ಇಂದಿನ ಅನಿವಾರ್ಯತೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ. ಎಸ್. ಮಾತನಾಡಿ, ಬದಲಾದ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಯೊಂದಿಗೆ ಬದುಕುವುದೂ ಒಂದು ಕೌಶಲ್ಯ. ಕೌಶಲ್ಯಗಳ ಅಳವಡಿಕೆಯಿಂದ ಪ್ರಾವಿಣ್ಯತೆಯು ಒಡಮೂಡುತ್ತದೆ. ಪ್ರಾವಿಣ್ಯತೆಯು ಮಹಿಳೆಯರು ಸ್ವಾವಲಂಬನೆಯ ಬದುಕನ್ನು ಕಟ್ಟಿ ಕೊಡುತ್ತದೆ ಎಂದರು.

ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜ್ ನ ನಿವೃತ್ತ ಉಪನ್ಯಾಸಕ ಡಾ.ಗೋಪಾಲಕೃಷ್ಣ ಕಮಲಾಪುರ ಮಾತನಾಡಿದರು. ವಿವೇಕ ಗ್ರಾಮೀಣ ಜೀವನಾಧಾರ ತರಬೇತಿ ಕೇಂದ್ರದ ಸಿಬ್ಬಂದಿ ಇದ್ದರು.