ವಿಕಲಚೇತನಕರು ಮುಖ್ಯ ವಾಹಿನಿಗೆ ಬರಲಿ: ಬೆಲ್ಲದ

| Published : Jan 20 2024, 02:01 AM IST

ಸಾರಾಂಶ

ಸ್ವತಂತ್ರ ಹೋರಾಟಗಾರರ ಸಮೃದ್ಧ ಮತ್ತು ಸ್ವಾಭಿಮಾನಿ ರಾಷ್ಟ್ರದ ಕನಸು ನನಸು ಮಾಡಲು ದಿವ್ಯಾಂಗರಿಗೆ ಸಾಕಷ್ಟು ಸೌಲಭ್ಯ ಹಾಗೂ ಯೋಜನೆಗಳು ನೀಡಿದ್ದಾಗಿ ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ಧಾರವಾಡ: ವಿಕಲತೆ ಶಾಪವಲ್ಲ, ಅದು ವರದಾನ ಎಂದು ಭಾವಿಸಬೇಕು. ತಮ್ಮ ವಿಶೇಷ ಶಕ್ತಿಯಿಂದ ಸಾಧನೆ ಮಾಡಿ, ಮುಖ್ಯ ವಾಹಿನಿಗೆ ಬರಬೇಕು ಎಂದು ವಿರೋಧ ಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಹೇಳಿದರು.

ಇಲ್ಲಿಯ ರಾಮನಗರದ ನಿವೇದಿತಾ ಪ್ರೌಢ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಸಕ್ಷಮ ಉತ್ತರ ಪ್ರಾಂತ ಧಾರವಾಡ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಉದ್ಘಾಟಿಸಿ ಮಾತನಾಡಿದರು.

ಸ್ವತಂತ್ರ ಹೋರಾಟಗಾರರ ಸಮೃದ್ಧ ಮತ್ತು ಸ್ವಾಭಿಮಾನಿ ರಾಷ್ಟ್ರದ ಕನಸು ನನಸು ಮಾಡಲು ದಿವ್ಯಾಂಗರಿಗೆ ಸಾಕಷ್ಟು ಸೌಲಭ್ಯ ಹಾಗೂ ಯೋಜನೆಗಳು ನೀಡಿದ್ದಾಗಿ ತಿಳಿಸಿದರು.

ದಿವ್ಯಾಂಗರು ಸಂಗೀತ, ಶಿಕ್ಷಣ, ಕ್ರೀಡೆ ಅನೇಕ ಕ್ಷೇತ್ರಗಲ್ಲಿ ಸಾಧನೆ ಮಾಡಿದ್ದಾರೆ. ಅವರಂತೆ ಸಾಧಿಸಲು ಕರೆ ನೀಡಿ, ಸಕ್ಷಮ ಜಿಲ್ಲಾ ಘಟಕದ ಕಚೇರಿ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ₹10 ಲಕ್ಷ ನೆರವು ನೀಡುವುದಾಗಿಯೂ ಭರವಸೆ ನೀಡಿದರು.

ಸಕ್ಷಮ ಉತ್ತರ ಪ್ರಾಂತ ಅಧ್ಯಕ್ಷ ಎಸ್.ಬಿ. ಶೆಟ್ಟಿ, ದಿವ್ಯಾಂಗರ ಶ್ರೇಯೋಭಿವದ್ಧಿಗೆ ಉತ್ತರದ 14 ಜಿಲ್ಲೆಗಳಲ್ಲಿ ಸಕ್ಷಮ ಸಂಘಟನೆ ಸ್ಥಾಪಿಸಬೇಕಿದೆ. ಈ ಪೈಕಿ ಎಂಟು ಜಿಲ್ಲೆಗಳಲ್ಲಿ ಸಂಘಟನೆ ಇದೆ. ಇನ್ನೂ ಆರು ಜಿಲ್ಲೆಗಳಲ್ಲಿ ಸಂಘಟನೆ ಸ್ಥಾಪಿಸಬೇಕಿದೆ. ಸಂಘಟನೆಯು ದಿವ್ಯಾಂಗರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೌಶಲ್ಯಾಭಿವೃದ್ಧಿ ತರಬೇತಿ, ಅಂಧತ್ವ ನಿವಾರಣೆಗೆ ಜಾಗೃತಿ ಜಾಥಾ, ರಕ್ತದಾನ ಶಿಬಿರ, ದಾನಿಗಳ ಸಹಕಾರದಿಂದ ಶಿಕ್ಷಣಕ್ಕೆ ಧನಸಹಾಯ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಇದೇ ಸಮಯದಲ್ಲಿ ಅರವಿಂದ ಬೆಲ್ಲದ ಅವರನ್ನು ಸನ್ಮಾನಿಸಲಾಯಿತು. ಸಕ್ಷಮ ಉತ್ತರ ಪ್ರಾಂತ ಉಪಾಧ್ಯಕ್ಷ ಡಾ. ವಿಜಯ ವಿಠ್ಠಲ ಮನಗೂಳಿ, ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಕೆ.ವಿ. ಅಚ್ಯುತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯ ಶ್ರೀಧರ ನಾಡಗೇರ, ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಜಗದೀಶ ಕೆ., ಸಕ್ಷಮ ಪದಾಧಿಕಾರಿಗಳಾದ ಕೇಶವ ಟಿ.ಪಿ., ಡಾ. ಅನಿರುದ್ಧ ಕುಲಕರ್ಣಿ, ಬಸವರಾಜ ಮಠಪತಿ, ಮಂಜುನಾಥ ಎಚ್.ಕೆ., ಸರ್ವಮಂಗಳಾ ಮೇದಿ ಇದ್ದರು.

ಇಟಲಿ ಮನಸ್ಥಿತಿಯವರಿಂದ ರಾಮನ ಬಗ್ಗೆ ಅಪೇಕ್ಷೆ ಅಸಾಧ್ಯಧಾರವಾಡ: ಕಾಂಗ್ರೆಸ್‌ ಮುಖಂಡರ ಮನಸ್ಥಿತಿ ಇಟಲಿಯದ್ದು. ಅವರಿಂದ ರಾಮನ ಬಗ್ಗೆ ಏನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವಿಪಕ್ಷ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಹೇಳಿದರು.ಇಟಲಿಯ ಕ್ಯಾಥೊಲಿಕ್‌ ಮೂಲದ ಅಧ್ಯಕ್ಷರನ್ನು ಕಾಂಗ್ರೆಸ್‌ ಸಾಕುತ್ತಿದೆ. ರಾಹುಲ್‌ ಮತ್ತು ಸೋನಿಯಾ ಗಾಂಧಿ ರೀತಿಯಲ್ಲಿಯೇ ಕಾಂಗ್ರೆಸ್‌ ಮುಖಂಡರ ಮನಸ್ಥಿತಿ ಬೆಳೆದಿದ್ದು, ಅವರನ್ನು ಮೆಚ್ಚಿಸಲು ರಾಮ ಮಂದಿರದ ಬಗ್ಗೆ ಕೆಟ್ಟ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಅವರಿಂದ ರಾಮನ ಬಗ್ಗೆ ಏನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ. ಆರಂಭದಲ್ಲಿ ರಾಮ ಕಾಲ್ಪನಿಕ ಎಂದರು. ರಾಮಸೇತು ತೆಗೆಯಬೇಕು ಎಂದರು. ರಾಮ ಹುಟ್ಟಿದ ನೆಲದಲ್ಲಿ ರಾಮ ಏಕೆ ಬೇಕು ಎಂದಿದ್ದರು. ಈಗ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗರದ್ದು ಹಿಂದೂ ವಿರೋಧಿ ಅಜೆಂಡಾ ಎಂದು ಬೆಲ್ಲದ ಟೀಕಿಸಿದರು.

ರಾಮ ಮಂದಿರ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬೆಲ್ಲದ, ಉದಯನಿಧಿ ಮೊದಲು ಅವರ ಪತ್ನಿ ಕೇಳಿ ಮಾತನಾಡಲಿ. ಅವರ ಮನೆಯವರು ದೇವಸ್ಥಾನಗಳಿಗೆ ಏತಕ್ಕೆ ಹೋಗುತ್ತಾರೆ. ನಮ್ಮ ಧರ್ಮ, ರಾಷ್ಟ್ರ, ನಮ್ಮ ಭಾವನೆ ಬಗ್ಗೆ ಅವರಿಗೆ ಚಿಂತನೆ ಇಲ್ಲ. ಅವರು ಮೊದಲಿನಿಂದಲೂ ಎಡಪಂಥಿ. ಅವರು ಚರ್ಚ್‌ಗಳ ಪರವಾಗಿಯೇ ಮಾತನಾಡುವವರು ಎಂದರು.ಸಿಎಂ ಬಗ್ಗೆ ಹೆಗಡೆ ಹೇಳಿಕೆ ಒಪ್ಪಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅನಂತಕುಮಾರ ಹೆಗಡೆ ಏಕವಚನ ಪ್ರಯೋಗ ಖಂಡನೀಯ. ನಾನೂ ಹೆಗಡೆ ಅವರ ಹೇಳಿಕೆ ಒಪ್ಪುವುದಿಲ್ಲ. ಮುಖ್ಯಮಂತ್ರಿಗಳು ಅನುಭವದಲ್ಲಿ ದೊಡ್ಡವರು. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು. ಅವರ ಬಗ್ಗೆ ಗೌರವದಿಂದ ಮಾತನಾಡಬೇಕಾಗುತ್ತದೆ. ಅದರ ಜೊತೆಗೆ ಮುಖ್ಯಮಂತ್ರಿಗಳು ಪ್ರಧಾನಿಗಳ ಬಗ್ಗೆ ಏಕವಚನ ಪ್ರಯೋಗ ಮಾಡಿದ್ದು ತಪ್ಪು. ಎರಡು ತಪ್ಪು ಸೇರಿ ಸರಿ ಆಗುವುದಿಲ್ಲ. ಅವರು ಮಾತನಾಡಿದ್ದಾರೆ ಎಂದು ಇವರು ಮಾತನಾಡುವುದು ಸರಿಯಲ್ಲ ಎಂದು ಬೆಲ್ಲದ ಹೇಳಿದರು.