ಯಾವುದೇ ಸಾಧನೆಯೂ ಆರಂಭದಲ್ಲಿ ಕಷ್ಟ ಎಂದೇ ಅನಿಸುತ್ತದೆ. ನಿರಂತರ ಪ್ರಯತ್ನ ಮತ್ತು ಸರಿಯಾದ ಕೌಶಲ್ಯ ಅಳವಡಿಸಿಕೊಂಡಾಗ ಯಶಸ್ಸು ತಾನಾಗಿಯೇ ಒಲಿಯುತ್ತದೆ
ಕೊಪ್ಪಳ: ಅಂಗವಿಕಲರು ದೇವರ ಸ್ವರೂಪ, ಗೌರವಿಸುವ ಕಾರ್ಯ ಆಗಲಿ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಆಗು ನೀ ಅನಿಕೇತನ ಫೌಂಡೇಶನ್ ಬೆಂಗಳೂರು ಸಂಯುಕಾರ್ಯಶ್ರಯದಲ್ಲಿ ಜಿಲ್ಲೆಯ ವಿಶೇಷಚೇತನರಿಗೆ ಹಮ್ಮಿಕೊಂಡ ಮೂರು ದಿನಗಳ ಕ್ರೀಡಾ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶೇಷ ಚೇತನರಲ್ಲಿ ಯಾವುದೇ ನ್ಯೂನತೆ ಇರುವುದಿಲ್ಲ, ಅವರಲ್ಲಿ ಸಾಧನೆ ಮಾಡುವ ವಿಶೇಷ ಗುಣಗಳಿರುತ್ತವೆ. ಅಂಗವಿಕಲತೆ ದೇಹಕ್ಕಷ್ಟೇ ಹೊರತು ಮನಸ್ಸಿಗಲ್ಲ. ಇಂದು ವೀಲ್‌ಚೇರ್ ಬ್ಯಾಡ್ಮಿಂಟನ್, ಈಜು ಸೇರಿದಂತೆ ಹತ್ತು ಹಲವು ಕ್ರೀಡೆಗಳಲ್ಲಿ ವಿಶೇಷ ಚೇತನರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಹಾಗಾಗಿ ವಯಸ್ಸು ಅಥವಾ ದೈಹಿಕ ಸಮಸ್ಯೆ ಲೆಕ್ಕಿಸದೆ ಸಾಧನೆ ಮಾಡುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿನ ಮೂಢನಂಬಿಕೆ ತೊಡೆದು ಹಾಕಿ, ದಿವ್ಯಾಂಗರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದರು.ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ಯಾವುದೇ ಸಾಧನೆಯೂ ಆರಂಭದಲ್ಲಿ ಕಷ್ಟ ಎಂದೇ ಅನಿಸುತ್ತದೆ. ನಿರಂತರ ಪ್ರಯತ್ನ ಮತ್ತು ಸರಿಯಾದ ಕೌಶಲ್ಯ ಅಳವಡಿಸಿಕೊಂಡಾಗ ಯಶಸ್ಸು ತಾನಾಗಿಯೇ ಒಲಿಯುತ್ತದೆ. ಥಾಮಸ್ ಅಲ್ವಾ ಎಡಿಸನ್ ಬಲ್ಬ್ ಆವಿಷ್ಕಾರ ಮಾಡುವಾಗ ಸಾವಿರಾರು ಬಾರಿ ಸೋತರೂ ಧೃತಿಗೆಡದೇ ಅದನ್ನು ಸಾಧಿಸಿದರು. ಅದೇ ರೀತಿ ವಿಶೇಷಚೇತನರು ತಮ್ಮ ಪಯಣ ಅರ್ಧಕ್ಕೆ ನಿಲ್ಲಿಸದೆ ಮುನ್ನಡೆಯಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ವಿಶೇಷಚೇತನರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆಯು ವಿವಿಧ ಯೋಜನೆ ಕೈಗೊಂಡಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ತರಬೇತಿ ಹಾಗೂ ಮೈದಾನ ಬಳಕೆಗೆ ವಿಶೇಷಚೇತನರಿಗೆ ಸದಾ ಮುಕ್ತ ಮತ್ತು ಉಚಿತ ಅವಕಾಶ ಕಲ್ಪಿಸಲಾಗಿದೆ. ಆಗು ನೀ ಅನಿಕೇತನ ಫೌಂಡೇಶನ್ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಪದಕ ವಿಜೇತ ಕ್ರೀಡಾಪಟು ಕರೆಸಿ ಇಲ್ಲಿನ ಕ್ರೀಡಾಪಟುಗಳಿಗೆ ಒನ್-ಟು-ಒನ್ (ನೇರ) ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.ಅಂತಾರಾಷ್ಟ್ರೀಯ ಮಟ್ಟದ ಪದಕ ವಿಜೇತ ಕ್ರೀಡಾಪಟುಗಳು ಮತ್ತು ತರಬೇತುದಾರರು ಹಾಗೂ ಸಲಹೆಗಾರರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಆಗು ನೀ ಅನಿಕೇತನ ಫೌಂಡೇಶನ್ ಸಂಸ್ಥಾಪಕರು ಹಾಗೂ ಸಿಇಓ ಧರಣಿ ಬಿ.ಸಸಿ, ಅಂತಾರಾಷ್ಟ್ರೀಯ ಈಜು ಕ್ರೀಡಾಪಟು ಬೆಳಗಾವಿಯ ರಾಘವೇಂದ್ರ ಆರ್. ಅನ್ವೇಕರ್, ಅಂತಾರಾಷ್ಟ್ರೀಯ ಕಾಮನ್ ವೆಲ್ತ್ ಕ್ರೀಡಾಕೂಟದ ಫೇನ್ಸಿಂಗ ಕ್ರೀಡೆಯಲ್ಲಿ ಬಂಗಾರದ ಪದಕ ವಿಜೇತರಾದ ಬೆಂಗಳೂರು-ಹೊಸಪೇಟೆಯ ರಾಘವೇಂದ್ರ ಪಿ., ಅಂತಾರಾಷ್ಟ್ರೀಯ ಈಜು ಕ್ರೀಡಾಪಟು ಬೆಳಗಾವಿಯ ಶ್ರೀಧರ ನಾಗಪ್ಪ ಮಾಳಗಿ, ಅಂತಾರಾಷ್ಟ್ರೀಯ ಶೆಟಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಹಾಗೂ ತರಬೇತುದಾರ ಬಿ. ಆನಂದಕುಮಾರ, ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಕ್ರೀಡಾ ಸಲಹೆಗಾರ ಆರ್. ರಾಮಚಂದ್ರ, ಅಂತಾರಾಷ್ಟ್ರೀಯ ಈಜು ಕ್ರೀಡಾಪಟು ಮತ್ತು ಅಂತಾರಾಷ್ಟ್ರೀಯ ತರಬೇತುದಾರರು ಹಾಗೂ ಸಲಹೆಗಾರ ಎಸ್.ಆರ್. ಶಿಂಧೆ, ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ ಸೇರಿದಂತೆ ಕ್ರೀಡಾ ಇಲಾಖೆ ಸಿಬ್ಬಂದಿಗಳಿದ್ದರು.