ಸಾರಾಂಶ
ಯಲ್ಲಾಪುರ: ವಿವಿಧ ಕಾರಣಗಳಿಂದ ಅಂಗವಿಕಲರಾಗಿರುವ ಸಮಾಜದ ಅನೇಕ ವ್ಯಕ್ತಿಗಳಿಗೆ ಬದುಕಿನ ನಿರ್ವಹಣೆ ಕಷ್ಟವಾದರೂ ಸ್ವಾಭಿಮಾನದಿಂದ, ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕುಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಮ್ಯಶ್ರೀ ತಿಳಿಸಿದರು.ತಾಲೂಕಿನ ಮಾವಿನಕಟ್ಟಾದ ಸ್ತ್ರೀಶಕ್ತಿ ಕಟ್ಟಡದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಆಶ್ರಯದಲ್ಲಿ ಕುಂದರಗಿ ಗ್ರಾಪಂ ಹಮ್ಮಿಕೊಂಡಿದ್ದ ೨೦೨೪- ೨೫ನೇ ಸಾಲಿನ ವಿಶ್ವ ಅಂಗವಿಕಲರ ದಿನಾಚರಣೆ, ಆರೈಕೆದಾರರ ದಿನಾಚರಣೆ ಹಾಗೂ ಅಂಗವಿಕಲರ ಸಮನ್ವಯ ಗ್ರಾಮಸಭೆ ಉದ್ಘಾಟಿಸಿ, ಮಾತನಾಡಿದರು.ಸಾಮಾನ್ಯವಾಗಿ ಯಾವುದೇ ವಯಸ್ಸಿನವರಿಗೂ ಅಂಗವಿಕಲತೆ ಉಂಟಾಗಬಹುದಾಗಿದ್ದು, ಅಂಗವೈಕಲ್ಯತೆಗೊಳಗಾದವರು ಮಾನಸಿಕವಾಗಿ ಕುಗ್ಗದೇ, ದೈಹಿಕ ರಕ್ತದೊತ್ತಡವು ಮತ್ತು ಸಕ್ಕರೆ ಕಾಯಿಲೆಗಳ ಬಗ್ಗೆ ಗಮನಹರಿಸಿ ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು, ವಿಶೇಷವಾಗಿ ಗರ್ಭಿಣಿಯರು ತಮ್ಮ ಆರೋಗ್ಯದೆಡೆ ನಿಗಾ ವಹಿಸಬೇಕು. ಅಂಗವಿಕಲರ ಕುರಿತಾಗಿ ಸಮಾಜದ ಅನುಕಂಪಕ್ಕಿಂತ ನೆರವಿನ ಗುಣ ಬೇಕು ಎಂದರು.ಗ್ರಾಪಂ ಸದಸ್ಯ ರಾಮಕೃಷ್ಣ ಹೆಗಡೆ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೆ ೪೪ ಅಂಗವಿಕಲರನ್ನು ಗುರುತಿಸಿ ಅವರಿಗೆ ಸಾಧ್ಯವಿರುವ ನೆರವು ನೀಡಲಾಗಿದೆ. ಅಲ್ಲದೇ, ೭ ಅಂಗವಿಕಲರಿಗೆ ಉಚಿತ ಮನೆ ನೀಡಲಾಗಿದೆ ಎಂದರು.ಮತ್ತೋರ್ವ ಗ್ರಾಪಂ ಸದಸ್ಯ ಗಣೇಶ್ ಹೆಗಡೆ ಮಾತನಾಡಿ, ಗೌರವಾನ್ವಿತರೇ ಆಗಿರುವ ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲೆಂದೇ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.ಸೇವಾ ಕಾರ್ಯಕರ್ತ ಸಲೀಂ ಶೇಖ್ ಮಾತನಾಡಿ, ಅಂಗವಿಕಲರಿಗಾಗಿ ಸರ್ಕಾರ ಜಾರಿಗೊಳಿಸಿರುವ ೧೬ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಯಮುನಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಪ್ರಕಾಶ್ ನಾಯ್ಕ, ರಾಮ ಸಿದ್ಧಿ ಮಾತನಾಡಿದರು. ಸದಸ್ಯರಾದ ದೀಪಾ ಸಿದ್ದಿ, ತುಂಗಾ ಚೆಲುವಾದಿ, ಕಾರ್ಯದರ್ಶಿ ಶಂಕರ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿಮಿತ್ತ ಅಂಗವಿಕಲರಿಗೆ ಉತ್ತಮ ಗುಣಮಟ್ಟದ ಚಾರ್ಜಿಂಗ್ ವಿದ್ಯುತ್ ಬಲ್ಬ್‌ಗಳನ್ನು ವಿತರಿಸಲಾಯಿತು. ಪಿಡಿಒ ರವಿ ಪಟಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿರ್ವಹಿಸಿದರು. ವಿಆರ್‌ಡಬ್ಲ್ಯು ಚಂದನ್ ಭಟ್ಟ ಸ್ವಾಗತಿಸಿ, ವಂದಿಸಿದರು.ರಸ್ತೆ, ಬೀದಿದೀಪ ಸಮಸ್ಯೆ ಪರಿಹರಿಸಲು ಆಗ್ರಹ
ಯಲ್ಲಾಪುರ: ಪಟ್ಟಣ ಪಂಚಾಯಿತಿ ಅವ್ಯವಸ್ಥೆಯನ್ನು ಖಂಡಿಸಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಮುರಿದು ಬಿದ್ದ ಬೀದಿದೀಪದ ಕಂಬದ ಅಣಕು ಶವಯಾತ್ರೆಯನ್ನು ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ಪಪಂ ಕಚೇರಿವರೆಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಆಡಳಿತದ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಬೀದಿದೀಪ ಸಮಸ್ಯೆ, ರಸ್ತೆ ಅವ್ಯವಸ್ಥೆ ಸೇರಿದಂತೆ ಪಟ್ಟಣ ವ್ಯಾಪ್ತಿಯ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಪಪಂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಶೀಘ್ರದಲ್ಲಿ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪಪಂ ಸದಸ್ಯ ಸೋಮೇಶ್ವರ ನಾಯ್ಕ, ಪ್ರಮುಖರಾದ ಪ್ರದೀಪ ಯಲ್ಲಾಪುರಕರ್, ವಿನೋದ ತಳೆಕರ್, ಸುನಿತಾ ವೆರ್ಣೆಕರ್, ರವಿ ದೇವಡಿಗ ಇತರರಿದ್ದರು.