ಸಾರಾಂಶ
ಶಿರಸಿ: ನಗರದ ರಂಗಧಾಮದಲ್ಲಿ ಡಿ. ೩ ಮತ್ತು ೪ರಂದು ನಡೆಯಲಿರುವ ಉತ್ತರಕನ್ನಡ ಜಿಲ್ಲಾ ೨೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ತಾಲೂಕಾಡಳಿತ ಸೌಧದಲ್ಲಿ ಶಾಸಕ ಭೀಮಣ್ಣ ನಾಯ್ಕ ಬಿಡುಗಡೆಗೊಳಿಸಿದರು.ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯ, ಜಿಲ್ಲೆ ಹಾಗೂ ವಿವಿಧ ತಾಲೂಕುಗಳಿಂದ ಸಾಹಿತಿಗಳು ಆಗಮಿಸಲಿದ್ದು, ಎಲ್ಲ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.ನಂತರ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಬೇಕಿದ್ದು, ಈಗಾಗಲೇ ಸಮಿತಿ ನೇಮಕ ಮಾಡಲಾಗಿದೆ. ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಸರ್ಕಾರಿ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಯಶಸ್ವಿಯಾಗಬೇಕು ಎಂದ ಅವರು, ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಡಿ. ೩ ಮತ್ತು ೪ರಂದು ನಡೆಯಲಿರುವ ಉತ್ತರಕನ್ನಡ ಜಿಲ್ಲಾ ೨೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಶಿರಸಿಯಲ್ಲಿ ಸಾಹಿತ್ತಿಕ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತಿರುವುದರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಶಿರಸಿಯಲ್ಲಿಯೇ ಆಯೋಜಿಸಲಾಗುತ್ತಿದ್ದು, ನಾಡನ್ನು ಗಮನಸೆಳೆದ ಕವಿಗಳು, ಸಾಹಿತಿಗಳು, ಸಾಂಸ್ಕೃತಿಕ ವ್ಯಕ್ತಿಗಳು ಹಾಗೂ ಹೆಸರಾಂತ ಪತ್ರಕರ್ತರು ಇದ್ದಾರೆ. ಐತಿಹಾಸಿಕ ಕಾರ್ಯಕ್ರಮವಾಗಿ ದಾಖಲಿಸಬೇಕೆಂಬ ಅಪೇಕ್ಷೆ ನಮ್ಮದಾಗಿದ್ದು, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆರ್.ಡಿ. ಹೆಗಡೆ ಆಲ್ಮನೆ ಆಯ್ಕೆ ಮಾಡಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಡಿಎಸ್‌ಪಿ ಕೆ.ಎಲ್. ಗಣೇಶ, ರೋಟರಿ ಅಧ್ಯಕ್ಷೆ ಡಾ. ಸುಮನಾ ಹೆಗಡೆ, ಸ್ಕೋಡ್‌ವೆಸ್ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ, ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಸೇರಿದಂತೆ ಮತ್ತಿತರರು ಇದ್ದರು. ಕಸಾಪ ತಾಲೂಕಾಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಸ್ವಾಗತಿಸಿದರು.