ನಾಟಕೋತ್ಸವ ಜನರಿಗೆ ಅರಿವು ಮೂಡಿಸುವ ಕೆಲಸವಾಗಲಿ

| Published : Nov 10 2024, 01:46 AM IST

ಸಾರಾಂಶ

ಹೊಸದುರ್ಗ: ನಾಟಕೋತ್ಸವ ಜನರ ಉತ್ಸವವಾಗಲಿ, ಜನರಿಗೆ ಅರಿವು ಮೂಡಿಸುವ ಕೆಲಸವಾಗಲಿ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಹೊಸದುರ್ಗ: ನಾಟಕೋತ್ಸವ ಜನರ ಉತ್ಸವವಾಗಲಿ, ಜನರಿಗೆ ಅರಿವು ಮೂಡಿಸುವ ಕೆಲಸವಾಗಲಿ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯಲ್ಲಿ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಸಾಣೇಹಳ್ಳಿಯಲ್ಲಿ ನಡೆಯುವ ರಂಗ ಚಟುವಟಿಕೆಗಳಿಗೆ ಈ ಹಿಂದೆ ಸರ್ಕಾರ ಪ್ರತಿ ವರ್ಷ 50 ಲಕ್ಷ ರು. ಅನುದಾನ ನೀಡುತ್ತಿದ್ದವು ಆದರೆ ಕಳೆದ 2 ವರ್ಷದಿಂದ ಅದನ್ನು ನಿಲ್ಲಿಸಲಾಗಿದೆ. ಇದರಿಂದ ರಂಗ ಚಟುವಟಿಕೆಗಳನ್ನು ನಡೆಸುವುದು ದುಸ್ತರವಾಗಿದೆ. ಭಕ್ತರು ಕೊಡುವ ಸಹಾಯದಿಂದ ನಡೆಸಿಕೊಂಡು ಬರಲಾಗುತ್ತಿದೆ. ಸರ್ಕಾರ ಆರ್ಥಿಕ ನೆರವು ನೀಡದಿದ್ದರು ಪರವಾಗಿಲ್ಲ ನಮ್ಮ ರಂಗ ಶಾಲೆಯನ್ನು ಅನುದಾನಿತ ಶಾಲೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಬಿಟ್ಟರೆ ಅದಕ್ಕೆ ಪೂರಕವಾದ ಯಾವುದೇ ಕಾರ್ಯ ಮಾಡಿಲ್ಲ. ಇನ್ನು ಮುಂದಾದರು ಸಾಂಸ್ಕೃತಿಕ ನಾಯಕದ ಆದರ್ಶಗಳನ್ನು ಜನರಿಗೆ ಬಿತ್ತುವ ಕೆಲಸ ಮಾಡಲಿ. ಪ್ರತಿ ಶಾಲೆಗಳಲ್ಲಿ ಶರಣರ ಬಗ್ಗೆ ನಾಟಕ, ವಚನ , ನೃತ್ಯಗಳನ್ನು ಮಾಡಿಸುವ ಕಾರ್ಯಕ್ರಮ ನೀಡುವಂತೆ ಮನವಿ ಮಾಡಲಾಗಿತ್ತು ಆದರೆ ಇನ್ನೂ ಉತ್ತರ ಬಂದಿಲ್ಲ ಎಂದು ಹೇಳಿದರು.

ಈ ಹಿಂದೆ ದೇಶದಾದ್ಯತ ನಡೆದ ವಚನಗಳ ನೃತ್ಯ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಅವರು 30 ಲಕ್ಷ ಕೊಡುವುದಾಗಿ ಹೇಳಿದ್ದರು ಈವೆರೆವಿಗೂ ಒಂದು ನಯಾ ಪೈಸೆಕೊಟ್ಟಿಲ್ಲ ಎಂದು ಹೆಳಲು ವಿಷಾದವಾಗುತ್ತದೆ ಎಂದರು.

ಶರಣರ ವಚನಗಳನ್ನು ತಿರುಚುವ ಕೆಲಸ ಆಗುತ್ತಿವೆ. ಇತ್ತೀಚಿಗೆ ಬಿಡುಗಡೆ ಮಾಡಿದ ವಚನ ದರ್ಶನ ಪುಸ್ತಕ ಅವೈಜ್ಞಾನಿಕವಾಗಿದೆ ಅದರಲ್ಲಿ ಬಸವಣ್ಣನನ್ನು ಕೇವಲ ಭಕ್ತಿ ಬಂಡಾರಿ ಎಂದು ಹೇಳುವುದಕ್ಕೆ ಸೀಮಿತಗೊಳಿಸಲಾಗಿದೆ. ಅಲ್ಲದೆ ಸನಾತನ ಧರ್ಮವನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಹೇಳಲಾಗಿದೆ. ಇದೊಂದು ಸಂಚು ಇಂತಹ ಕೃತಿಗಳನ್ನು ಸರ್ಕಾರ ಮಟ್ಟುಗೋಲು ಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ರಂಗ ಕಲಾವಿದರಿಗೆ ನಿವೃತ್ತಿ ವೇತನವನ್ನು ಹೆಚ್ಚಿಸಬೇಕು. ದೇಶದ ನಿಜವಾದ ಸಂಪತ್ತು ಕಲೆ ಮತ್ತು ಸಂಸ್ಕೃತಿ ಇದನ್ನು ಉಳಿಸಬೇಕು ಶಾಲೆಗಳಿಗೆ ರಂಗ ಶಿಕ್ಷಕರನ್ನು ನೇಮಿಸಬೇಕು ಇದರಿಂದ ಮಕ್ಕಳಲ್ಲಿ ಅದ್ಭುತವಾದ ಪರಿವರ್ತನೆಗೆ ಸಾಧ್ಯವಾಗುತ್ತದೆ. ದೇವಸ್ಥಾನಗಳಿಗೆ ಕೊಡುವ ಅನುದಾನವನ್ನು ನಮ್ಮಂತ ರಂಗ ಶಾಲೆಗಳಿಗೆ ನೀಡಬೇಕು ಎಂದು ಹೇಳಿದರು.

ಶರಣರ ಐತಿಹಾಸಿಕ ಸ್ಮಾರಕಗಳು ಸಾಕಷ್ಟಿವೆ ಅವುಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಿ. ಮಹನೀಯರ ಜಯಂತಿ ಆಚರಿಸುವುದು ಸರ್ಕಾರದ ಕೆಲಸವಲ್ಲ ಜಯಂತಿಗಳಿಗೆ ಸರ್ಕಾರ ಆರ್ಥಿಕ ನೆರವು ಕೊಡಬಾರದು . ಯಾರು ಯಾರ ಜಯಂತಿ ಬೇಕಾದರು ಮಾಡಿಕೊಳ್ಳಲಿ ಎಂದರು.

ಇದೇ ವೇಳೆ ಇಳಕಲ್ ನ ರಂಗ ಕರ್ಮಿ ಮಹಾಂತೇಶ್ ಎಂ ಗಜೇಂದ್ರಗಡ ಅವರಿಗೆ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನೆಂದು ಪ್ರಶಸ್ತಿ ಬಯಸಿದವನಲ್ಲ. ನಾವು 8 ಜನ ಅಣ್ಣತಮ್ಮಂದಿರು ಅವರೆಲ್ಲಾ ಉದ್ಯೋಗದಲ್ಲಿದ್ದಾರೆ. ನಾನೊಬ್ಬ ಮಾತ್ರ ನಾಟಕದ ಗೀಳಿಗೆ ಬಿದ್ದಿದ್ದೇನೆ ಇದಕ್ಕೆ ನನ್ನ ತಂದೆ ತಾಯಿಗಳ ಪ್ರೋತ್ಸಾಹ ಇದ್ದುದ್ದರಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಈ ಪ್ರಶಸ್ತಿಯನ್ನು ನನ್ನ ಅಕ್ಕ ಸರೋಜಕ್ಕ ಅವರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಸಂಸದ ಗೋವಿಂದಕಾರಜೋಳ ಮಾತನಾಡಿ, ರಂಗಭೂಮಿಗೂ ಅಖಂಡ ಬಿಜಾಪುರ ಜಿಲ್ಲೆ ಸಾವಿರ ವರ್ಷದ ನಂಟು ಇದೆ. ಸನಾದಿ ಅಪ್ಪಣ್ಣ, ಅಮೀರಬಾಯಿ ಕರ್ನಾಟಕಿ, ಪಿ.ಬಿ.ಧುತ್ತರಗಿ, ಬಿ.ಆರ್‌.ಅರಿಶಿಣಗೋಡಿ ಮೊದಲಾದ ಖ್ಯಾತ ರಂಗಕರ್ಮಿಗಳು ಬಿಜಾಪುರ ಜಿಲ್ಲೆಯವರಾಗಿದ್ದು, ಈ ಬಾರಿಯ ಶ್ರೀ ಶಿವಕುಮಾರ ಪ್ರಶಸ್ತಿ ಬಿಜಾಪುರ ಜಿಲ್ಲೆಗೆ ಬಂದಿರುವುದು ಸಂತಸ ತಂದಿದೆ ಎಂದರು.

ವೇದಿಕೆಯಲ್ಲಿ ಚಿತ್ರದುರ್ಗ ಶಾಸಕ ವಿರೇಂದ್ರಪಪ್ಪಿ, ಬೆಳ್ಳಿ ಪ್ರಕಾಶ್‌, ಮಾಜಿ ವಿಧಾನ ಪರಿಷತ್‌ ಸದಸ್ಯ ರುದ್ರೇಗೌಡ, ಶ್ರೀನಿವಾಸಕಪ್ಪಣ್ಣ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌, ಅರುಣ್‌ಗೋವಿಂದಪ್ಪ, ಇಂದುಮತಿಸಾಲಿಮಠ್‌ ಉಪಸ್ಥಿತರಿದ್ದರು.

ಮಹಾಂತೇಶ್ ಎಂ ಗಜೇಂದ್ರಗಡ ಅವರಿಗೆ ಶಿವಕುಮಾರ ಪ್ರಶಸ್ತಿರಂಗಕರ್ಮಿ, ರಂಗಸಂಘಟಕ, ಕಲಾವಿದ, ಕಲಾನಿರ್ದೇಶಕ ಇಳಕಲ್‌ ನ ಮಹಾಂತೇಶ್ ಎಂ ಗಜೇಂದ್ರಗಡ ಅವರಿಗೆ ಶಿವಕುಮಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪುರಸ್ಕೃತರು ಕಳೆದ 42 ವರ್ಷಗಳಿಂದ ರಂಗಭೂಮಿ ಕ್ಷೇತ್ರ ಹಾಗೂ ವೃತ್ತಿ ನಾಟಕ ಕಂಪನಿಗಳಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಪಾರಿತೋಷಕ ಒಳಗೊಂಡಿದೆ.

ರಾಷ್ಟ್ರೀಯ ನಾಟಕೋತ್ಸವಕ್ಕೆ ಅದ್ಧೂರಿ ತೆರೆಕಳೆದ 5 ದಿನಗಳಿಂದ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಶನಿವಾರ ಶ್ರೀ ಶಿವಕುಮಾರ ಪ್ರಶಸ್ತಿ ವಿತರಣೆಯೊಂದಿಗೆ ಅದ್ಧೂರಿ ತೆರೆ ಬಿದ್ದಿತು.

ಐದು ದಿನಗಳು ಪ್ರತಿದಿನ ಬೆಳಿಗ್ಗೆ ಚಿಂತನಾ ಗೋಷ್ಠಿ ನಡೆಸಲಾಯಿತು. ಚಿಂತಕರು ಹಾಗೂ ಸ್ವಾಮೀಜಿಗಳು ಅನೇಕ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಅಲ್ಲದೆ ಮದ್ಯಾಹ್ನ ಒಳಾಂಗಣ ಕ್ರೀಡಾಂಗಣದಲ್ಲಿ ಶರಣಪತಿ- ಲಿಂಗಸತಿ, ನಡಪಾವಾಡೈ, ಅಕ್ಕನಾಗಲಾಂಭಿಕೆ, ಧಾಂ ಧೂಂ ಸುಂಟರಗಾಳಿ, ಮಾಚಿದೇವ ನಾಟಕಗಳು ಪ್ರದರ್ಶನಗೊಂಡರೆ , ಶಿವಕುಮಾರ ಬಯಲು ರಂಗಮಂದಿರದ ಮುಖ್ಯ ವೇದಿಕೆಯಲ್ಲಿ ತುಲಾಭಾರ, ಪರಸಂಗದ ಗೆಡ್ಡೆತಿಮ್ಮ, ಬಂಗಾರದಮನುಷ್ಯ, ಕಾಲಚಕ್ರ, ಮಹಾಬೆಳಗು, ಕೋಳೂರು ಕೊಡಗೂರು ನಾಟಕಗಳನ್ನು ಶಿವಸಂಚಾರ ಕಲಾವಿದರು ಅಭಿನಯಿಸಿದರು.

ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದೆ ಆದರೆ ಅದಕ್ಕೆ ಪೂರಕವಾದ ಯಾವ ಕೆಲಸವನ್ನು ಮಾಡಿಲ್ಲ , ಕೇವಲ ಘೋಷಣೆಗಷ್ಠೆ ಸೀಮಿತವಾಗಿದೆ

- ಶ್ರೀನಿವಾಸ ಕಪ್ಪಣ್ಣ, ರಂಗ ಸಂಘಟಕ

ಈ ಬಾರಿಯ ನಾಟಕೋತ್ಸವ ಬಹುತೇಕ ರಾಜಕೀಯ ನಾಯಕರ ಅನುಪಸ್ಥಿತಿಯಲ್ಲಿ ಕಲಾಸಕ್ತರು ಹಾಗೂ ಚಿಂತಕರ ನೇತೃತ್ವದಲ್ಲಿ ನಡೆಯಿತು. ಇದು ನಾಟಕೋತ್ಸವದ ಇತಿಹಾಸದಲ್ಲಿಯೇ ಮೊದಲ ಬಾರಿ ಸಚಿವರುಗಳು ಹಾಗೂ ಶಾಸಕರು ಗೈರು ಎದ್ದು ಕಾಣುತ್ತಿತ್ತು.