ಕುಡಿಯುವ ನೀರು ಸರಬರಾಜು ಯೋಜನೆ ಕಾರ್ಯಗತಗೊಳ್ಳಲಿ

| Published : Nov 21 2024, 01:03 AM IST

ಸಾರಾಂಶ

ಮುಖ್ಯ ರಸ್ತೆಯ ರಿಪೇರಿಯ ಬಗ್ಗೆ ಪ್ರಶ್ನೆ ಬಂದಾಗ ಮುಂದಿನ ಸಭೆಗೆ ಲೋಕೋಪಯೋಗಿ ಇಲಾಖೆ ಹಾಗೂ ಆರೋಗ್ಯ ಅಧಿಕಾರಿಗಳನ್ನು ಕರೆಸಬೇಕೆಂದು ಸದಸ್ಯರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಮೂಡುಬಿದಿರೆ ಪುರಸಭೆಯ ವಿಶೇಷ ಸಭೆ ಮಂಗಳವಾರ ನಡೆಯಿತು. ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದು ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಸಭೆ ನಡೆಸಿಕೊಟ್ಟರು.

ಶಾಸಕರು ಸುಮಾರು 77 ಕೋಟಿ ರು. ವೆಚ್ಚದ ಕೇಂದ್ರ ಸರ್ಕಾರದ ಕುಡಿಯುವ ನೀರು ಯೋಜನೆಯನ್ನು ಮೂಡುಬಿದಿರೆಯಲ್ಲಿ ಅನುಷ್ಠಾನಗೊಳಿಸುತ್ತಿರುವುದು ಸ್ತುತ್ಯಾರ್ಹ ಎಂದು ಸಭೆ ಹರ್ಷ ವ್ಯಕ್ತಪಡಿಸಿತು. ಆದರೆ ಉತ್ತಮ ಸ್ಥಿತಿಯಲ್ಲಿರುವ ಪೈಪುಗಳನ್ನು, ಟ್ಯಾಂಕಿಗಳನ್ನು ಕಾಪಾಡಿಕೊಂಡು ಯೋಜನೆ ಮುಂದುವರೆಯಲಿ. ಎತ್ತರ ಪ್ರದೇಶವಾದ ಕಡಲಗೆರೆಯ ಸಮೀಪ ಹೆಚ್ಚು ಸಾಮರ್ಥ್ಯದ ಟ್ಯಾಂಕಿಯನ್ನು ನಿರ್ಮಿಸಿ ಇಡೀ ಮೂಡುಬಿದಿರೆಗೆ ನೀರಿನ ಸರಬರಾಜು ಮಾಡಲು ಸಾಧ್ಯ ಇದೆ ಎಂದು ಸದಸ್ಯರಾದ ಪಿಕೆ ತೋಮಸ್, ಕೊರಗಪ್ಪ, ಪುರಂದರ ದೇವಾಡಿಗ, ಮಮತಾ, ರೂಪಾ ಶೆಟ್ಟಿ ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಸುರೇಶ್ ಪ್ರಭು ಹಸಿದವರಿಗೆ ಮೊದಲು ಅನ್ನ ಕೊಡಿ ಎಂದಾಗ ಸಭೆಯಲ್ಲಿ ನಗು ತೇಲಿತು.

ಹಿಂದಿನ ಎರಡು ಮೂರು ಸಂದರ್ಭಗಳಲ್ಲಿ ಅರೆಬರೆ ಕಾಮಗಾರಿಯನ್ನು ಮಾಡಿದ ನೀರು ಸರಬರಾಜು ಮಂಡಳಿಯನ್ನು ನಂಬಲು ಸಾಧ್ಯವಿಲ್ಲ. ಈಗಾಗಲೇ ಎರಡು ಮೂರು ಕಡೆ ಪೈಪುಗಳು ಒಡೆದು ಹೋಗಿದ್ದು ಅದನ್ನು ರಿಪೇರಿ ಮಾಡಿರುವುದಿಲ್ಲ ಎಂದು ಸಭೆ ಗಮನಕ್ಕೆ ಸುರೇಶ್ ಕೋಟ್ಯಾನ್ ತಂದಾಗ ಅವೆಲ್ಲವನ್ನು ತಕ್ಷಣ ಸರಿಪಡಿಸಬೇಕು ಎಂದು ಶಾಸಕರು ನಿರ್ದೇಶಿಸಿದರು. ಅಲ್ಲದೆ ಮುಂದಿನ ಎಲ್ಲ ಕಾಮಗಾರಿಯೂ ಕೂಡ ಸಮರ್ಪಕವಾಗಿ ನಡೆಯುವ ಮೊದಲು ಹಿರಿಯ ಸದಸ್ಯರನ್ನು ಕರೆದು ಮತ್ತೊಮ್ಮೆ ಯೋಜನೆಯ ಬಗ್ಗೆ ಚರ್ಚಿಸಿ ಮುಂದಿನ ಸಭೆಯಲ್ಲಿ ಪ್ರಸ್ತುತಪಡಿಸಬೇಕೆಂದು ಇಂಜಿನಿಯರ್‌ಗಳಾದ ಜಯಕುಮಾರ್, ಅಜಯ್ ಕುಮಾರ್, ರಕ್ಷಿತ್ ರಾವ್ ಹಾಗೂ ಸೋಮಶೇಖರ ರೆಡ್ಡಿ ಅವರಿಗೆ ನಿರ್ದೇಶಿಸಿದರು. ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಇರುವ ಎಲ್ಲಾ ಅನಧಿಕೃತ ಮೀನು ಮಾರಾಟ ಸಾಲುಗಳನ್ನು ತೆರವುಗೊಳಿಸಿ ಸ್ವರಾಜ್ಯ ಮೈದಾನದ ಮೀನು ಮಾರಾಟದ ಕೇಂದ್ರ ಪ್ರದೇಶದಲ್ಲಿಯೇ ನೆಲೆಗೊಳ್ಳುವಂತೆ ಮಾಡಬೇಕೆಂದು ಸದಸ್ಯರಾದ ಅಬ್ದುಲ್ ಕರೀಂ, ಪುರಂದರ ದೇವಾಡಿಗ, ಕೊರಗಪ್ಪ, ಸುರೇಶ್ ಪ್ರಭು ಏರು ಧ್ವನಿಯಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಮಾಜಿ ಉಪಾಧ್ಯಕ್ಷ ಸುರೇಶ್ ಕೋಟ್ಯಾನ್ 1995ರಲ್ಲಿ ಸರ್ಕಾರವು ವ್ಯಾಪಾರಕ್ಕೆ ಅನುಮತಿ ನೀಡುವ ಮೊದಲು ಹಲವಾರು ಅಂಶಗಳನ್ನು ತಿಳಿಸಿದೆ ಅವುಗಳನ್ನು ಪರಾಮರ್ಶಿಸುವಂತೆ ವಿನಂತಿಸಿದರು.ಸದಸ್ಯರ ಕೆಲವು ಮಾತಿಗೆ ಬೇಸರಗೊಂಡ ಶಾಸಕರು ಒಂದು ಹಂತದಲ್ಲಿ ಮೂಡುಬಿದಿರೆ ನನ್ನ ಮನೆ. ನಾನು ಯಾವುದೇ ಪಕ್ಷ ಭೇದ ಮಾಡುತ್ತಿಲ್ಲ. ಎಲ್ಲರಿಗೂ ಉಪಕಾರವಾಗುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡಲ್ಲಿ ಎಲ್ಲರಿಗೂ ಲಾಭವಾಗಲಿದೆ. ಆದಷ್ಟು ಶೀಘ್ರ ಹಿರಿಯ ಸದಸ್ಯರನ್ನು ಕರೆದು ಪುನಃ ಚರ್ಚಿಸಿ ಮುಂದಿನ ಸಭೆಯಲ್ಲಿ ಯೋಜನೆಯ ಅನುಷ್ಠಾನದ ವಿವರಗಳನ್ನು ನೀಡಲಾಗುವುದು ಎಂದು ಸಮಜಾಯಿಷಿಕೆ ಕೊಟ್ಟರು.ಹೈಮಾಸ್ಟ್ ದೀಪಗಳನ್ನು ರಿಪೇರಿ ಮಾಡಿಸದ ಕಂಪೆನಿಯನ್ನು ಬ್ಲ್ಯಾಕ್ ಲೀಸ್ಟಿಗೆ ಸೇರಿಸಿ ಹೊಸದಾಗಿ ಶೀಘ್ರ ರಿಪೇರಿ ಮಾಡಿಸಲು ಮುಖ್ಯಾಧಿಕಾರಿಗಳಲ್ಲಿ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ , ಜೋಸ್ಸಿ ಮಿನೇಜಸ್, ರಾಜೇಶ್ ಶೆಟ್ಟಿ ಕೇಳಿಕೊಂಡರು.

ಮುಖ್ಯ ರಸ್ತೆಯ ರಿಪೇರಿಯ ಬಗ್ಗೆ ಪ್ರಶ್ನೆ ಬಂದಾಗ ಮುಂದಿನ ಸಭೆಗೆ ಲೋಕೋಪಯೋಗಿ ಇಲಾಖೆ ಹಾಗೂ ಆರೋಗ್ಯ ಅಧಿಕಾರಿಗಳನ್ನು ಕರೆಸಬೇಕೆಂದು ಸದಸ್ಯರು ಆಗ್ರಹಿಸಿದರು. ಸಭೆಯ ಪ್ರಾರಂಭದಲ್ಲಿ ರಸ್ತೆ ದುರ್ಘಟನೆಯಲ್ಲಿ ತೀರಿಕೊಂಡ ಪುರಸಭಾ ಕಾರ್ಮಿಕ ರವೀಂದ್ರ ರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.