ಮಕ್ಕಳ ಕಾಳಜಿ ಬಗ್ಗೆ ಹಿರಿಯರು ಜಾಗೃತಗೊಳ್ಳಲಿ

| Published : Oct 08 2024, 01:03 AM IST

ಸಾರಾಂಶ

ಮಕ್ಕಳಿಗೆ ಸಂಸ್ಕಾರದ ಕೊರತೆಯೇ ಮಹಿಳಾ ಸಬಲೀಕರಣಕ್ಕೆ ಬಹುದೊಡ್ಡ ತಡೆಯಾಗಿದೆ ಎಂದು ವಕೀಲೆ ಅನಿತಾ ಅಭಿಪ್ರಾಯಪಟ್ಟಿದ್ದಾರೆ.

- ತಾಲೂಕುಮಟ್ಟದ ವಿಚಾರ ಗೋಷ್ಠಿಯಲ್ಲಿ ವಕೀಲೆ ಅನಿತಾ ಉಪನ್ಯಾಸ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಮಕ್ಕಳಿಗೆ ಸಂಸ್ಕಾರದ ಕೊರತೆಯೇ ಮಹಿಳಾ ಸಬಲೀಕರಣಕ್ಕೆ ಬಹುದೊಡ್ಡ ತಡೆಯಾಗಿದೆ ಎಂದು ವಕೀಲೆ ಅನಿತಾ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಕುಂಬಳೂರು ಹೊರವಲಯದ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ಹಮ್ಮಿಕೊಂಡ ತಾಲೂಕುಮಟ್ಟದ ವಿಚಾರ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು. ಮೊಬೈಲ್‌ಗಳ ಬಳಕೆಯಿಂದ ಬಾಲಕ, ಬಾಲಕಿಯರು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ. ಶಿಕ್ಷಣ ಸಂಸ್ಥೆಗಳು ಸಂಸ್ಕಾರ ನೀಡದೇ, ಬರೀ ಶಿಕ್ಷಣ ವ್ಯಾಪಾರ ಮಾಡುತ್ತಿವೆ ಎಂದು ವಿಷಾದಿಸಿದರು.

ಸನಾತನ ಸಂಸ್ಕೃತಿಯ ಭಾರತೀಯರು ಇಂದು ವಿದೇಶಿ ಸಂಸ್ಕೃತಿಗಳ ಅನುಕರಣೆಯಲ್ಲಿ ತೊಡಗಿದ್ದಾರೆ. ಮಕ್ಕಳು ಬೇರೆಯವರ ಪ್ರೀತಿಯನ್ನು ಅರಸಿ ತೆರಳುತ್ತಿದ್ದಾರೆ. ೧೫ ವಯೋಮಿತಿಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಯಾರು ಎಂದು ಪ್ರಶ್ನಿಸಿದ ಅನಿತಾ, ಪೊಕ್ಸೋ ಕಾಯ್ದೆಯಡಿ ಸಾವಿರಾರು ಬಾಲಕರು ಬಂಧಿಯಾಗಿರುವುದು ವಿಷಾಧನೀಯ. ಕೌಟುಂಬಿಕ ಜೀವನದಲ್ಲಿ ಗಟ್ಟಿ ಸಂಬಂಧಗಳು ಉಳಿದಿಲ್ಲ. ಇಲ್ಲಿ ಹಿರಿಯರೂ ಜಾಗೃತರಾಗುವುದು ಅಗತ್ಯವಿದೆ ಎಂದರು.

ಮಕ್ಕಳು ಕೇಳುವ ಮೊಬೈಲ್, ಬೈಕ್ ಇನ್ನಿತರೆ ಎಲ್ಲವನ್ನೂ ಕೊಡಿಸಬೇಡಿ. ಶಾಲೆ- ಕಾಲೇಜಿಗೆ ಹೋಗುವ ಕೆಲ ಮಕ್ಕಳ ಬ್ಯಾಗ್‌ನಲ್ಲಿ ಲವ್ ಲೆಟರ್, ಕಾಂಡೋಮ್‌ಗಳು ಸಿಗುತ್ತಿವೆ. ಮನೆಯಲ್ಲಿ ಮಕ್ಕಳು ಇಲ್ಲದಿದ್ದಾಗ ಅವರ ಬ್ಯಾಗ್‌ಗಳನ್ನು ಪೋಷಕರು ತಪಾಸಣೆ ಮಾಡಬೇಕು. ಮನೆಯಲ್ಲಿ ಮಹಿಳೆಯರು ವಟ ವಟ ಅಂತಾರೆ ಎಂದು ಪುರುಷರು ಬಾರ್‌ನತ್ತ ದಾರಿ ಹಿಡಿಯುತ್ತಾರೆ. ಗಂಡು- ಹೆಣ್ಣು ಇಬ್ಬರೂ ಒಂದೇ ಸಹನೆ, ಹೊಂದಾಣಿಕೆಯಿಂದ ಸಂಸಾರ ನಿರ್ವಹಣೆ ಮಾಡಬೇಕಿದೆ ಎಂದು ಅನಿತಾ ಸಲಹೆ ನೀಡಿದರು.

ಡಾ. ಲಕ್ಷ್ಮೀ ಅವರು ಮಹಿಳೆಯರ ಆಹಾರ ಪದ್ಧತಿ, ಎಎಸ್‌ಐ ಶ್ರೀನಿವಾಸ್ ಸಂಚಾರ ಸುರಕ್ಷತೆ, ಆಭರಣ ಧರಿಸುವಿಕೆ, ಪ್ರವಚನಕಾರ ಸಿದ್ದೇಶ್ ಧಾರ್ಮಿಕ ಪದ್ಧತಿ ಬಗ್ಗೆ ತಿಳಿಸಿದರು.

ದೇವಸ್ಥಾನ ಟ್ರಸ್ಟಿ ಬಿ.ನಾಗೇಂದ್ರಪ್ಪ ವಿಚಾರಗೋಷ್ಠಿ ಉದ್ಘಾಟಿಸಿದರು. ಜನಜಾಗೃತಿ ವೇದಿಕೆ ಉಪಾಧ್ಯಕ್ಷ ನಾಗನಗೌಡ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಲಕ್ಷ್ಮಣ್, ಮೇಲ್ವಿಚಾರಕರಾದ ಸಂಪತ್‌ಲಕ್ಷ್ಮೀ, ಮಾರುತಿ, ರಕ್ಷಿತಾ ಹಾಗೂ ಮಹಿಳಾ ಸಂಘಗಳ ಸಾವಿರಾರು ಸದಸ್ಯರು ಇದ್ದರು.

- - - -೭ಎಂಬಿಆರ್೧: ವಿಚಾರಗೋಷ್ಠಿಯನ್ನು ದಾನಿಗಳಾದ ಬಿ.ನಾಗೇಂದ್ರಪ್ಪ ಉದ್ಘಾಟಿಸಿದರು.