ಹವ್ಯಕರು ಸಂಘಟಿತರಾಗಿ ಹೋರಾಡಲಿ: ಶ್ರೀಧರ ಭಟ್ಟ ಕೆಕ್ಕಾರ

| Published : Nov 25 2024, 01:02 AM IST

ಹವ್ಯಕರು ಸಂಘಟಿತರಾಗಿ ಹೋರಾಡಲಿ: ಶ್ರೀಧರ ಭಟ್ಟ ಕೆಕ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಬೇರೆ ಸಮುದಾಯಗಳು ಸರ್ಕಾರಗಳು ನಡುಗುವಷ್ಟು ರೀತಿಯಲ್ಲಿ ಸಂಘಟಿತರಾಗಿದ್ದಾರೆ. ಅದರಂತೆ ನಾವು ಸಹ ಸಂಘಟಿತರಾಗಬೇಕು. ಇಲ್ಲದಿದ್ದರೆ ನಮ್ಮ ಕೂಗು ಕೇಳುವವರಿಲ್ಲದಂತಾಗುತ್ತದೆ.

ಶಿರಸಿ: ಹವ್ಯಕರು ಹೋರಾಟದ ಮೂಲಕ ಸಂಘಟನೆ ಬೆಳೆಸಬೇಕು. ಆಗ ಸರ್ಕಾರಗಳಿಗೆ ನಮ್ಮ ಕೂಗು ಕೇಳಿಸಲು ಸಾಧ್ಯ ಎಂದು ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ ತಿಳಿಸಿದರು.ಭಾನುವಾರ ನಗರದ ಲಯನ್ಸ್ ಸಭಾಭವನದಲ್ಲಿ ಅಖಿಲ ಹವ್ಯಕ ಮಹಾಸಭಾ ಹಾಗೂ ಹವ್ಯಕ ಶಿಕ್ಷಕರ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಬಿಂಬ ಹಾಗೂ ಯುವಜನೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೇರೆ ಸಮುದಾಯಗಳು ಸರ್ಕಾರಗಳು ನಡುಗವಷ್ಟು ರೀತಿಯಲ್ಲಿ ಸಂಘಟಿತರಾಗಿದ್ದಾರೆ. ಅದರಂತೆ ನಾವು ಸಹ ಸಂಘಟಿತರಾಗಬೇಕು. ಇಲ್ಲದಿದ್ದರೆ ನಮ್ಮ ಕೂಗು ಕೇಳುವವರಿಲ್ಲದಂತಾಗುತ್ತದೆ. ಹವ್ಯಕ ಸಮುದಾಯ ಮೀಸಲಾತಿಯನ್ನೇನೂ ಕೇಳುತ್ತಿಲ್ಲ. ನಮ್ಮ ಪಾಡಿಗೆ ಬದುಕು ಕಟ್ಟಿಕೊಂಡಿದ್ದೇವೆ. ಹೆಚ್ಚಾಗಿ ಅಡಕೆ ಬೆಳೆಯನ್ನು ನಂಬಿಕೊಂಡು ಜೀವನ ಮಾಡುತ್ತಿದೆ. ಅಡಕೆಗೆ ಉತ್ತಮ ದರ ಬಂದು ಸುಧಾರಿಸಿಕೊಳ್ಳುತ್ತೇವೆ ಎನ್ನುವ ಹೊತ್ತಿಗೆ ಬೇರೆ ದೇಶಗಳಿಂದ ಅಡಕೆ ಆಮದು ಹೆಚ್ಚಾಗುತ್ತಿದೆ. ಅಡಕೆಗೆ ರೋಗಗಳು ವ್ಯಾಪಿಸುತ್ತಿದೆ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಲು ಹೋರಾಟದ ಗಟ್ಟಿ ಧ್ವನಿ ಬೇಕಾಗುತ್ತದೆ. ಹಾಗೇ ಹವ್ಯಕರು ಇನ್ನೂ ಹಲವು ಸಮಸ್ಯೆ ಎದುರಿಸುತ್ತಿದೆ. ಇದಕ್ಕೆಲ್ಲ ಸಂಘಟಿತರಾಗಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಹಾಸಭಾದ ಮಾಜಿ ಅಧ್ಯಕ್ಷ ಜಿ.ವಿ. ಹೆಗಡೆ ಕಾನಗೋಡ ಮಾತನಾಡಿ, ವಿಶ್ವ ಹವ್ಯಕ ಸಮ್ಮೇಳನ ಯಶಸ್ವಿಯಾಗಿಸುವುದಕ್ಕೆ ಸಹಕರಿಸುವಂತೆ ಮನವಿ ಮಾಡಿದರು.ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಮಾತನಾಡಿ, ಇತಿಹಾಸ ಕಂಡ ಸಭ್ಯ ಜನಾಂಗ ಅದು ಹವ್ಯಕ ಸಮುದಾಯ. ನಮ್ಮ ಆಚರಣೆಗಳು ಬೇರೆಯವರಿಗೆ ಮಾದರಿಯಾಗಿದೆ. ಯಾವುದೇ ಕ್ಷೇತ್ರದಲ್ಲೂ ಹೋದರೂ ಹವ್ಯಕ ಮಾದರಿ ಮುನ್ನೆಲೆಗೆ ಬರುತ್ತದೆ ಎಂದರು.ಹವ್ಯಕರು ಜೀವನದ ನಿರ್ವಹಣೆಗೆ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅನಕ್ಷರಸ್ಥರು ಎಂಬುದು ಇಲ್ಲ. ಹೆಚ್ಚೆಚ್ಚು ಶಿಕ್ಷಣ ಪಡೆಯುತ್ತಿದ್ದಾರೆ. ಇದರಿಂದಾಗಿ ಮೂಲ ನೆಲೆ ಬಿಟ್ಟು ಹೋಗಿ ಸಮುದಾಯ ಕವಲುದಾರಿಯಲ್ಲಿದೆ. ಹೀಗಾಗಿ ಹವ್ಯಕತನ ಉಳಿಸಿಕೊಂಡು ಹೋಗುವುದು ಹೇಗೆ ಪ್ರಶ್ನೆ ಮೂಡಿದೆ ಎಂದರು.ಅಖಿಲ ಹವ್ಯಕ ಮಹಾಸಭಾದ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಾತನಾಡಿ, ಬೆಂಗಳೂರಿನಲ್ಲಿ ಡಿ. ೨೭ರಿಂದ ಮೂರು ದಿನಗಳ ಕಾಲ ನಡೆಯುವ ವಿಶ್ವ ಹವ್ಯಕರ ಸಮ್ಮೇಳನಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಬಂದು ಯಶಸ್ವಿಯಾಗಿಸಿಬೇಕು. ಎಲ್ಲ ವ್ಯವಸ್ಥೆ ಇರಲಿದೆ. ನಮ್ಮ ಮೂಲ ಸಂಸ್ಕೃತಿಯ ಅನಾವರಣವಾಗಲಿದೆ. ಹವ್ಯಕರ ನೂರಾರು ಪಾಕಗಳು ಪ್ರದರ್ಶನವಾಗಲಿದೆ ಎಂದರು.ಮಹಾಸಭಾ ನಿರ್ದೇಶಕ ಶಶಾಂಕ ಹೆಗಡೆ, ಪ್ರತಿಬಿಂಬ ಸಂಚಾಲಕ ವಿ.ಎಂ. ಹೆಗಡೆ ಮುಂತಾದವರು ಪಾಲ್ಗೊಂಡಿದ್ದರು. ಶಿಕ್ಷಕರಾದ ವಿಜಯಾ ಶಾನಭಾಗ, ಶಂಕರ ಹೆಗಡೆ, ಡಿ.ಪಿ. ಹೆಗಡೆ ನಿರೂಪಿಸಿದರು.ನಂತರ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಅವರು ಸರಸ್ವತಿ ಉಪಾಸನೆ ಕುರಿತು ಉಪನ್ಯಾಸ ನೀಡಿದರು. ನಂತರ ಹವ್ಯಕರ ಆಹಾರ ಮತ್ತು ಆರೋಗ್ಯ ವಿಷಯವಾಗಿ ಸ್ವಾಸ್ಥ್ಯ ಚಿಂತನ ಕಾರ್ಯಕ್ರಮ ನಡೆಯಿತು. ಈ ವೇಳೆ ವಿವಿಧ ವಿಭಾಗಗಳಲ್ಲಿ ಹವ್ಯಕರಿಗೆ ನಾನಾ ಸ್ಪರ್ಧೆಗಳು ನಡೆದವು.