ಸಾರಾಂಶ
ಕನ್ಮಡಪ್ರಭ ವಾರ್ತೆ ಕಾರಟಗಿ
ವಾಣಿಜ್ಯ ಪಟ್ಟಣ ಕಾರಟಗಿಯಲ್ಲಿ ಉದ್ದೇಶಿತ ಗ್ರಾಮದೇವತೆ ದ್ಯಾವಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ಸಮುದಾಯಗಳ ಸಹಭಾಗಿತ್ವ ಅತೀ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಇಲ್ಲಿನ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಈ ದೇವಸ್ಥಾನ ಸರ್ವ ಸಮುದಾಯಗಳಿಗೆ ಸೇರಿದೆ. ಗ್ರಾಮದೇವತೆ ದೇವಸ್ಥಾನ ನಿರ್ಮಾಣ ವೇಳೆ ದ್ಯಾವಮ್ಮ ದೇವಿಯನ್ನು ಮಾತ್ರ ನಿರ್ಮಾಣ ಮಾಡಬೇಕು. ಅದು ಬಿಟ್ಟು ಬೇರೆ ದೇವರ ನಿರ್ಮಾಣ ಕಾರ್ಯ ನಡೆಯುವುದಿಲ್ಲ. ಮಂದಿರ ನಿರ್ಮಾಣಕ್ಕೆ ದೇಣಿಗೆ ಅವಶ್ಯವಾಗಿದೆ. ಹೀಗಾಗಿ ದೇಣಿಗೆ ನೀಡುವವರ ಪಟ್ಟಿ ಮಾಡಿ. ದೇವಸ್ಥಾನದ ನಿರ್ಮಾಣಕ್ಕೆ ನಾನಾ ಸಮುದಾಯದ ಪ್ರಮುಖರು ಮುಂದಾಗಬೇಕು. ದೇಣಿಗೆ ಬಂದಂಥ ಹಣದ ದುಡ್ಡಿನ ಪಕ್ಕಾ ಲೆಕ್ಕ ನೀಡಬೇಕು. ದೇಣಿಗೆ ನೀಡುವ ವಿಚಾರದಲ್ಲಿ ಯಾರಿಗೂ ಒತ್ತಾಯ ಬೇಡ. ಅವರ ಕೈಲಾದಷ್ಟು ದೇಣಿಗೆ ನೀಡಲಿ ಎಂದರು.
ಬುನಾದಿ ಹಾಕಲು ಕನಿಷ್ಠ ₹25 ಲಕ್ಷ ಹಣ ಬೇಕು. ನಂತರ ಮಂದಿರ ನಿರ್ಮಾಣ ಮಾಡುವವರಿಗೆ ಮುಂಗಡವಾಗಿ ಶೇ. 40 ಬಳಿಕ 40 ಅಂತಿಮವಾಗಿ ಶೇ. 20 ಹಣ ನೀಡಬೇಕು. ಸಾರ್ವಜನಿಕರ ದುಡ್ಡಿಗೆ ಪೈಸೆ, ಪೈಸೆ ಲೆಕ್ಕ ನೀಡಬೇಕು. ಸರ್ವರ ಸಹಕಾರದಿಂದ ಆದಷ್ಟು ಬೇಗನೆ ಮಂದಿರ ನಿರ್ಮಾಣ ಮಾಡಬೇಕು. ಸರ್ಕಾರದಿಂದ ಅನುದಾನ ಸಿಕ್ಕರೂ ಇನ್ನೂ ಒಳ್ಳೆಯದು ಎಂದರು.ಮಾಜಿ ಸಚಿವ ಸಾಲೋಣಿ ನಾಗಪ್ಪ ಮಾತನಾಡಿ, ಬಹು ವರ್ಷಗಳ ಹಿಂದಿನ ಕನಸು ದ್ಯಾವಮ್ಮ ದೇವಿ ದೇವಸ್ಥಾನ ನಿರ್ಮಾಣ ಮಾಡುವ ಕಾಲ ಈಗ ಪಕ್ವವಾಗಿದೆ. ಪಟ್ಟಣದ ಸರ್ವರು ತಮ್ಮ ಕೈಲಾದ ಕಾಣಿಕೆ ನೀಡಬೇಕು. ನಾನು ಸೇರಿದಂತೆ ಮಾಜಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾಣಿಕೆ ನೀಡುತ್ತೇವೆ. ಈಗಾಗಲೇ ತಾಲೂಕಿನ ಕಿಂದಿಕ್ಯಾಂಪ್, ಗಂಗಾವತಿ, ಕೊಟಯ್ಯ ಕ್ಯಾಂಪ್ ಗಳಲ್ಲಿ ಇಂಥ ದೇವಸ್ಥಾನಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೇ ಮಾದರಿಯ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಕೋಟಿ ರೂ. ಗೂ ಮೇಲೂ ಖರ್ಚಾಗಲಿದೆ. ದೇಣಿಗೆ ನೀಡುವ ಕೈಗಳು ಮುಂದಾದಷ್ಟು ಶೀಘ್ರ ಮಂದಿರ ನಿರ್ಮಾಣವಾಗಲಿದೆ ಎಂದರು. ಕೆಲ ಉದ್ಯಮಿಗಳು, ವಿವಿಧ ಮುಖಂಡರು ಅಭಿಪ್ರಾಯ ಹೇಳಿದರು. ಕೆಲವರು ಮಂದಿರ ನಿರ್ಮಾಣಕ್ಕೆ ದೇಣಿಗೆಗೆ ಹೆಸರು ಬರೆಸಿದರು. ಸರ್ವ ಸಮುದಾಯಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.