ಬಸವಣ್ಣನವರ ಜೀವನಾದರ್ಶ ಅನುಕರಣೆ ಆಗಲಿ

| Published : Sep 05 2024, 12:36 AM IST

ಬಸವಣ್ಣನವರ ಜೀವನಾದರ್ಶ ಅನುಕರಣೆ ಆಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಮಹಾಮಾನವತಾವಾದಿ ಬಸವಣ್ಣನವರ ವಿಚಾರಗಳು ಎಲ್ಲ ಕಾಲಕ್ಕೂ ಮೌಲಿಕವೆನಿಸಿವೆ. ಅವುಗಳು ನಮ್ಮ ಅನುಕರಣೆಯ ಭಾಗವಾಗಬೇಕಾಗಿದೆ. ಜೀವನ ಪಥವನ್ನು ಬದಲಾಯಿಸುವ ಶಕ್ತಿ ಬಸವಣ್ಣನವರ ವಚನಗಳಲ್ಲಿ ಅಡಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾಮಾನವತಾವಾದಿ ಬಸವಣ್ಣನವರ ವಿಚಾರಗಳು ಎಲ್ಲ ಕಾಲಕ್ಕೂ ಮೌಲಿಕವೆನಿಸಿವೆ. ಅವುಗಳು ನಮ್ಮ ಅನುಕರಣೆಯ ಭಾಗವಾಗಬೇಕಾಗಿದೆ. ಜೀವನ ಪಥವನ್ನು ಬದಲಾಯಿಸುವ ಶಕ್ತಿ ಬಸವಣ್ಣನವರ ವಚನಗಳಲ್ಲಿ ಅಡಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಬೆಳಗಾವಿ ಶಾಹಾಪುರದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠ ಹಾಗೂ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂಟಪ, ದಾನಮ್ಮದೇವಿ ಮಂದಿರ ಟ್ರಸ್ಟ್ ಸಹಯೋಗದಲ್ಲಿ ಬಸವ ವಾಹಿನಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶತಶತಮಾನಗಳವರೆಗೆ ನಾವು ಬಸವಣ್ಣನವರನ್ನು ರಾಜ್ಯದ ಆಚೆಗೆ ಬಿಟ್ಟುಕೊಡಲಿಲ್ಲ. ಇಂದು ಅವರ ಸಂದೇಶಗಳು ವಿಶ್ವಮಾನ್ಯವೆನಿಸಿವೆ. ಇಂದಿನ ಯುವಜನಾಂಗಕ್ಕೆ ಅದನ್ನು ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ಫ.ಗು. ಹಳಕಟ್ಟಿಯಂತಹ ಪ್ರಾಥಃಸ್ಮರಣೀಯರಿಂದ ವಚನ ಸಾಹಿತ್ಯ ಬೆಳಕು ಕಂಡಿತು. ಇಲ್ಲದಿದ್ದರೆ ವಚನಗಳನ್ನು ಅಭ್ಯಸಿಸಲು ಸಾಧ್ಯವಾಗುತ್ತಿರಲಿಲ್ಲ. ಅವರನ್ನು ಸ್ಮರಿಸಿಕೊಳ್ಳಲೇಬೇಕು. ಧಾರವಾಡದ ಬಸವಪೀಠಕ್ಕೆ ಎಸ್.ವಿ. ಬೆಂಬಳಗಿಯವರ ಕೊಡುಗೆ ಅಪಾರವಾಗಿದೆ. ಮುರಗೋಡದ ಮಹಾಂತಜ್ಜನವರ ಭಕ್ತರಾಗಿ ಅವರ ಕಾರ್ಯವನ್ನು ಬಸವಪೀಠದ ಮೂಲಕ ಯಶಸ್ವಿಯಾಗಿ ನೆರವೇರಿಸಿದರು ಎಂದು ಡಾ.ಕೋರೆ ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ ಅವರು ಬಸವಣ್ಣನವರನ್ನು ಒಂದು ಧರ್ಮಕ್ಕೆ ಒಂದು ಜಾತಿಗೆ ಸೀಮಿತಗೊಳಿಸುವ ಕಾರ್ಯ ನಡೆಯುತ್ತಿದೆ. ಅದು ಸಲ್ಲದು. ಬಸವಣ್ಣನವರು ವಿಶ್ವನಾಯಕರು. ಸಮಾನತೆಯ ಹರಿಕಾರರು. ಅವರ ಆದರ್ಶಪಥದಲ್ಲಿ ಮುನ್ನಡೆಯೋಣ. ಬಸವಪೀಠ ಈ ನಿಟ್ಟಿನಲ್ಲಿ ಕಳೆದ ಐವತ್ತು ವರ್ಷಗಳಿಂದ ಮಹತ್ತರ ಕಾರ್ಯಗಳನ್ನು ಮಾಡುತ್ತ ಬಂದಿದೆ ಎಂದರು.

ಸಾನ್ನಿಧ್ಯವನ್ನು ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಬಸವಣ್ಣನವರದು ಮಾತೃ ಹೃದಯಿ ನಡೆನುಡಿಯಾಗಿತ್ತು. ಒಂದು ಕಾಲಘಟ್ಟದಲ್ಲಿ ನಿಂತು ಸಮಾಜ ಧರ್ಮಗಳನ್ನು ತಿದ್ದುತೀಡುವ ಕಾರ್ಯವನ್ನು ಸೂಕ್ಷ್ಮವಾಗಿ ನಿರ್ವಹಿಸಿದರು. ಶತಶತಮಾನಗಳು ಉರುಳಿದರೂ ಅವರ ನಡೆ ಪ್ರಸ್ತುತವೆನಿಸಿವೆ ಎಂದು ಎಂದರು.

ಧಾರವಾಡ ಮುರಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣನವರನ್ನು ನಮ್ಮ ಹೃದಯದಲ್ಲಿಟ್ಟು ಪೂಜಿಸಬೇಕಾಗಿದೆ. ಅವರ ಕಾಯಕ ದಾಸೋಹ ಸಿದ್ಧಾಂತಗಳು ವ್ಯಕ್ತಿ ಕಲ್ಯಾಣ ಹಾಗೂ ಸಮಾಜ ಕಲ್ಯಾಣದಲ್ಲಿ, ರಾಷ್ಟ್ರನಿರ್ಮಾಣದಲ್ಲಿ ಮಹತ್ವ ಪಡೆದಿವೆ. ಅಂತೆಯೇ ಯುಗಯುಗಗಳು ಕಳೆದರೂ ಸತ್ಯದರ್ಶನ ಅಡಗಿದೆ ಎಂದರು.

ಮುರಗೋಡ ದುರದುಂಡೀಶ್ವರಮಠದ ನೀಲಕಂಠ ಸ್ವಾಮೀಜಿ, ಮುರಗೋಡದ ಮಹಾಂತಜ್ಜ ಮಾತನಾಡಿದರು. ಬಸವಣ್ಣ ಸಾಂಸ್ಕೃತಿಕ ನಾಯಕ ವಿಷಯದ ಕುರಿತು ವಿದ್ವಾಂಸ ಡಾ.ವಿ.ಎಸ್.ಮಾಳಿ ಸವಿವರವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯಲ್ಲಿ 40 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ನಿಮಿತ್ತ ಡಾ.ಪ್ರಭಾಕರ ಕೋರೆಯವರನ್ನು ಸತ್ಕರಿಸಲಾಯಿತು. . ಬಸವಪೀಠದ ಸಂಯೋಜಕ ಡಾ.ಸಿ.ಎಂ. ಕುಂದಗೋಳ ಮಾತನಾಡಿದರು. ದಾನಮ್ಮದೇವಿ ಟ್ರಸ್ಟ್ ನ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಎಂ. ಕಿತ್ತೂರ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಎ.ಎಸ್.ಪಾಟೀಲ, ಎಂ.ಜಿ. ಬೊಳಮಲ್ಲ, ಡಾ.ಎಂ.ಎಸ್. ಉಮದಿ, ಎಸ್.ವ್ಹಿ. ಬಾಗಿ, ಸಚಿನ ಖಡಬಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.