ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಡಿ.20 ರಿಂದ 22ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ಮಿತವಾಗಿರುವಂತೆ ನೋಡಿಕೊಂಡು ಸಮ್ಮೇಳನವನ್ನು ಅರ್ಥಪೂರ್ಣಗೊಳಿಸಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಲಹೆ ನೀಡಿದರು.ಬುಧವಾರ ವಿಕಾಸಸೌಧದ ತಮ್ಮ ಕೊಠಡಿಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡ್ಯ ಜಿಲ್ಲೆಯ ಸೊಗಡಿನ ಜೊತೆಗೆ ರಾಜ್ಯದ ಬದುಕನ್ನು ಬೆಸೆಯುವ ಸ್ವರೂಪದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕಿದೆ. ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಕನ್ನಡದ ಎಲ್ಲಾ ಮನಸ್ಸುಗಳು ಒಂದಾಗಿ ಶ್ರಮಿಸಬೇಕು. ಇದರಲ್ಲಿ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು ಸಂಘ- ಸಂಸ್ಥೆಗಳು, ಸಾಹಿತಿಗಳು, ಚಿಂತಕರು, ಅಧಿಕಾರಿ ಸಿಬ್ಬಂದಿ ಹೆಚ್ಚಿನ ಕಾಳಜಿ ಮತ್ತು ಪರಿಶ್ರಮ ವಹಿಸುವಂತೆ ತಿಳಿಸಿದರು.
ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ಇಲಾಖೆಯಿಂದ 25 ಕೋಟಿ ರು. ಬಿಡುಗಡೆಗೆ ಶಿಫಾರಸು ಮಾಡಿದೆ. ಆದಷ್ಟು ಅದರ ಇತಿ- ಮಿತಿಯೊಳಗೆ ವೆಚ್ಚ ನಿಯಂತ್ರಣ ಮಾಡಿಕೊಳ್ಳುವುದು ಸೂಕ್ತ ಎಂದ ಅವರು, ಸಭೆಯಲ್ಲಿ ವಿವಿಧ ಉಪ ಸಮಿತಿಗಳ ಅಧ್ಯಕ್ಷರಾದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳ ಅಭಿಪ್ರಾಯ, ಸಮಿತಿಗಳ ತೀರ್ಮಾನಗಳನ್ನು ಆಲಿಸಿದ ಸಚಿವರು ಸಾಹಿತ್ಯ ಸಂಭ್ರಮಕ್ಕೆ ಯಾವುದೇ ಕೊರತೆಯಾಗದಂತೆ ಸಂಘಟನೆ ಮಾಡಲು ಸೂಚಿಸಿದರು.ಸಮ್ಮೇಳನ ನಡೆಯುವ ಹಿನ್ನೆಲೆ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ವ್ಯಾಪಕ ಪ್ರಚಾರ, ಉತ್ತಮ ಅಲಂಕಾರ ಮಾಡಬೇಕು. ಆಕರ್ಷಕ ಮೆರವಣಿಗೆ, ಅರ್ಥಪೂರ್ಣ ವಿಚಾರಗೋಷ್ಠಿ, ಕಾರ್ಯಕ್ರಮಗಳು, ಮುದ್ದೆ, ಬಸ್ಸಾರು ಸೇರಿದಂತೆ ಸ್ಥಳೀಯ ಆಹಾರ ಹಾಗೂ ಉತ್ತರ ಕರ್ನಾಟಕದ ತಿನಿಸುಗಳ ಸಮಿಶ್ರಣಗೊಂಡ ಊಟೋಪಚಾರ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.
ಸಾಹಿತ್ಯ ಸಮ್ಮೇಳನದ ಮೊದಲೆರಡು ದಿನ ಸಂಜೆಯ ನಂತರ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಮ್ಮೇಳನಕ್ಕೆ ವಿಶೇಷ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಶಾಸಕರಾದ ನರೇಂದ್ರಸ್ವಾಮಿ, ರವಿಕುಮಾರ್ (ಗಣಿಗ), ಉದಯ್ ಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನಸಭಾ ಪರಿಷತ್ ಸದಸ್ಯರಾದ ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ನಾಡೋಜ ಮಹೇಶ್ ಜೋಷಿ, ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಕಾರ್ಯಕಾರಿ ಸಮಿತಿ ಸಂಚಾಲಕಿ ಮೀರಾ ಶಿವಲಿಂಗಯ್ಯ ಇತರರಿದ್ದರು.