ಸಾರಾಂಶ
ಗೋವಿಂದ ಕಾರಜೋಳ ಅತ್ಯಂತ ಅನುಭವಿ ರಾಜಕಾರಣಿ. ಇಂತಹವರ ಸೇವೆ ಚಿತ್ರದುರ್ಗಕ್ಕೆ ಅಗತ್ಯವಿದ್ದು ಮತದಾರರು ತಮ್ಮ ಬದ್ದತೆ ಪ್ರದರ್ಶಿಸುವುದರ ಮೂಲಕ ಕಾರಜೋಳ ಅವರ ಆಯ್ಕೆ ಮಾಡುತ್ತಾರೆಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗ ಗೋವಿಂದ ಕಾರಜೋಳ ಅತ್ಯಂತ ಅನುಭವಿ ರಾಜಕಾರಣಿ. ಇಂತಹವರ ಸೇವೆ ಚಿತ್ರದುರ್ಗಕ್ಕೆ ಅಗತ್ಯವಿದ್ದು ಮತದಾರರು ತಮ್ಮ ಬದ್ದತೆ ಪ್ರದರ್ಶಿಸುವುದರ ಮೂಲಕ ಕಾರಜೋಳ ಅವರ ಆಯ್ಕೆ ಮಾಡುತ್ತಾರೆಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದರು.
ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಸಭ್ಯರ ಕೊರತೆ ಎದ್ದು ಕಾಣುತ್ತಿದೆ. ದೇಶಕ್ಕಾಗಿ ಹೋರಾಟ ಮಾಡುವವರ ಪೈಕಿ, ಕಾರಜೋಳ ಕೂಡಾ ಒಬ್ಬರು. ಕಾರಜೋಳ ಒಬ್ಬರು ಉತ್ತಮರು, ಅವರು ಗೆಲ್ಲುವ ವಿಶ್ವಾಸ ಇದೆ. ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಎರಡು ಕ್ಷೇತ್ರದಲ್ಲಿ ನಾನು ಸಕ್ರಿಯವಾಗಿರುವೆ. ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ, ಪಕ್ಷದ ಕೆಲಸ ನೋಡಿಕೊಳ್ಳುವೆ ಎಂದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಾರಜೋಳರು ಡಿಸಿಎಂ ಆಗಿ ರಾಜ್ಯದಲ್ಲಿ ಉತ್ತಮ ಸೇವೆ ಮಾಡಿದ್ದಾರೆ. ಅವರೊಬ್ಬ ಅಜಾತಶತ್ರು, ಸಜ್ಜನ ರಾಜಕಾರಣಿ. ಚಿತ್ರದುರ್ಗ ಜಿಲ್ಲೆಯ ಜನ ಅಭಿವೃದ್ಧಿ ದೃಷ್ಟಿಯಿಂದ ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತಾರೆ. ಮೋದಿ ಮತ್ತೋಮ್ಮೆ ಪ್ರಧಾನಿಯಾಗಲೆಂದು ಕಾರಜೋಳ ಬೆಂಬಲಕ್ಕೆ ಜನ ನಿಲ್ಲುತ್ತಾರೆಂದರು.
ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‌ನಲ್ಲಿ ಒಬ್ಬನೇ ಒಬ್ಬ ಪ್ರಧಾನಿ ಅಭ್ಯರ್ಥಿ ಇಲ್ಲ. ಮೋದಿ ಒಬ್ಬ ರಾಜ, ಕಾಂಗ್ರೆಸ್‌ನ ರಾಹುಲ್ ಪೋತರಾಜ. ರಾಜನಿಗೂ ಪೋತ ರಾಜನಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಗೆ ಮತಯಾಚನೆ ಮಾಡುವ ನೈತಿಕತೆ ಇಲ್ಲ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ಶಾಸಕರು ಇಡೀ ರಾಜ್ಯದಲ್ಲಿ ಒಂದು ರುಪಾಯಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಅದಕ್ಕಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರು ಪಾಲ್ಗೊಳ್ಳುತ್ತಿಲ್ಲ. ಇಡೀ ರಾಜ್ಯದಲ್ಲಿ 28, ದೇಶದಲ್ಲಿ 400 ಸೀಟು ಗೆದ್ದು ಮೋದಿ ಪ್ರಧಾನಿಯಾಗುತ್ತಾರೆ.ನಾನು 500 ಕಿಮೀ ದೂರ ಇದ್ದರೂ ಇಡೀ ರಾಜ್ಯದಲ್ಲಿ ಹಲವು ಇಲಾಖೆಗಳಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾನು ಚಿತ್ರದುರ್ಗಕ್ಕೆ ಗೊತ್ತು ಎನ್ನುವ ಕಾರಣಕ್ಕೆ ಹೈಕಮಾಂಡ್ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ಗೋವಿಂದ ಕಾರಜೋಳ ಹೇಳಿದರು. ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ವಿಧಾನಪರಿಷತ್ ಮುಖ್ಯ ಸಚೇತಕ ಎನ್ ರವಿಕುಮಾರ್, ಶಾಸಕರಾದ ಎಂ ಚಂದ್ರಪ್ಪ, ಗಾಲಿ ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್, ಮಾಜಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ, ಎಸ್.ತಿಪ್ಪೇಸ್ವಾಮಿ, ಎಸ್ ಕೆ ಬಸವರಾಜನ್, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ವೈ.ಎ ನಾರಾಯಣಸ್ವಾಮಿ, ಚಿದಾನಂದ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಹನುಮಂತೆ ಗೌಡ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ಮಾಜಿ ಸಂಸದ ಜನಾರ್ಧನಸ್ವಾಮಿ, ಜೆಡಿಎಸ್ ಮುಖಂಡರಾದ ಕಾಂತರಾಜ್, ಯಶೋಧರ್, ರವೀಶ್, ರವೀಂದ್ರ, ತಿಪ್ಪೇಸ್ವಾಮಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಪದಾಧಿಕಾರಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.