ಸಾರಾಂಶ
ಧಾರವಾಡ: ಕೃಷಿ ಮೇಳ ಆಧುನಿಕ ಕೃಷಿ ತಂತ್ರಜ್ಞಾನ, ನೂತನ ಬೆಳೆ ಪದ್ಧತಿ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಮಾಹಿತಿ ನೀಡುವ ಪ್ರಮುಖ ವೇದಿಕೆಯಾಗಿದೆ. ಮೇಳವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಚಿವ ಸಂತೋಷ ಎಸ್. ಲಾಡ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಕೃಷಿ ಮೇಳದ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.ಮೇಳಕ್ಕೆ ಆಗಮಿಸುವ ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಬೇಕು. ರೈತರಿಗೆ ವಿಶೇಷ ಉಪನ್ಯಾಸಗಳ ಲಾಭ ಸಿಗಬೇಕು. ಕೃಷಿ ಸುಧಾರಣೆ, ಅಭಿವೃದ್ಧಿ, ಉತ್ತಮ ಕೃಷಿ ಅಭ್ಯಾಸಗಳು ಗೊತ್ತಾಗಬೇಕು ಎಂದು ಹೇಳಿದರು.
ವಾಣಿಜ್ಯ ಚಟುವಟಿಕೆಗಳಿಗೆ, ವ್ಯಾಪಾರಕ್ಕೆ ಸೀಮಿತವಾಗಬಾರದು. ಜನಜಂಗುಳಿ ಸೇರುವ ಜಾತ್ರೆಯಾಗದೇ ನಿಜವಾಗಿಯೂ ರೈತರ ಜಾತ್ರೆಯಾಗಿ ಯಶಸ್ವಿ ಆಗುವಂತೆ ಮಾಡಬೇಕು. ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಂದಾಜು 1 ಲಕ್ಷ ಹಕ್ಟೇರ್ ಬೆಳೆ ನಾಶವಾದ ವರದಿಯಾಗಿದೆ. ಈ ಕುರಿತು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ತಜ್ಞರು ಮತ್ತು ಕೃಷಿ ವಿದ್ಯಾರ್ಥಿಗಳು ಕ್ಷೇತ್ರ ಭೇಟಿ ಮೂಲಕ ಅಧ್ಯಯನ ಮಾಡಬೇಕು. ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವಲ್ಲಿ ವಿಶ್ವವಿದ್ಯಾಲಯ ಮುಖ್ಯ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಮೇಳದ ವಿವಿಧ ಮಳಿಗೆಗಳ ಆಯೋಜನೆ, ಸಾರಿಗೆ ವ್ಯವಸ್ಥೆ, ಭದ್ರತೆ, ಆರೋಗ್ಯ ಸೇವೆಗಳು ಮತ್ತು ಪ್ರಚಾರ ಕಾರ್ಯಗಳ ಬಗ್ಗೆ ವಿವರವಾಗಿ ಚರ್ಚಿಸಿದರು.
ಈ ವರ್ಷ ವಿಭಿನ್ನ ಕಾರ್ಯಕ್ರಮಗಳನ್ನು, ಉಪನ್ಯಾಸಗಳನ್ನು ಆಯೋಜಿಸಬೇಕು. ಮುಖ್ಯವಾಗಿ ಜಿಲ್ಲೆಯಲ್ಲಿ ಬೆಳೆ ವಿಮೆ ಕುರಿತು ವೈಜ್ಞಾನಿಕ ಅಧ್ಯಯನವಾಗಬೇಕು. ಮಾವು ವಿಮೆ ಎಲ್ಲ ರೈತರಿಗೆ ಸಕಾಲಕ್ಕೆ ಲಭಿಸುತ್ತಿಲ್ಲ. ಈ ಕುರಿತು ಸಮರ್ಪಕ ಅಧ್ಯಯನವಾಗಬೇಕು ಎಂದರು.ಅನೇಕ ರೈತರು ಜಮೀನುಗಳಲ್ಲಿ ಬಿತ್ತಿದ ಬೀಜಗಳು ಮೊಳಕೆ ಒಡೆಯುತ್ತಿಲ್ಲ, ಇದಕ್ಕೆ ಪರಿಹಾರ ನೀಡುವಂತೆ ಕೋರುತ್ತಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರದ ನೀತಿ ಯಾವ ರೀತಿ ಇರಬೇಕು ಎಂಬುವುದರ ಬಗ್ಗೆ ಹಿರಿಯ ವಿಜ್ಞಾನಿಗಳಿಂದ ಅಧ್ಯಯನವಾಗಬೇಕು ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿ ವಿವಿ ಉಪಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಕೃಷಿ ಮೇಳವನ್ನು ಸೆ. 13ರಿಂದ ಸೆ. 16ರ ವರೆಗೆ ಆಯೋಜಿಸಲಾಗಿದೆ. ಈ ವರ್ಷದ ಕೃಷಿ ಮೇಳದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆ ಅವಕಾಶಗಳ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ನೀಡಲಾಗುವುದು. ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ, ನೂತನ ಬೀಜಗಳ ಪರಿಚಯ, ಸಾವಯವ ಕೃಷಿ ಪದ್ಧತಿಗಳು ಮತ್ತು ಜಲಸಂಪನ್ಮೂಲಗಳ ಸಮರ್ಪಕ ಬಳಕೆ ಕುರಿತು ತಜ್ಞರಿಂದ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.ಶಾಸಕ ಎನ್.ಎಚ್. ಕೋನರೆಡ್ಡಿ, ಎಸ್ಪಿ ಗುಂಜನ್ ಆರ್ಯ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.