ಸಾರಾಂಶ
ಕೆವಿಕೆಯಲ್ಲಿ ರೈತ ದಿನಾಚರಣೆ ಉದ್ಘಾಟಿಸಿ ಜಿಯಾವುಲ್ಲಾ ಕರೆ
ಕನ್ನಡಪ್ರಭ ವಾರ್ತೆ ಬೀದರ್
ರೈತರು ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಹೇಳಿದರು.ಜನವಾಡಾ ಬಳಿಯ ಕೆವಿಕೆಯಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ರೋಟರಿ ಕ್ಲಬ್, ನ್ಯೂ ಸೆಂಚುರಿ ಮತ್ತು ಜಿಲ್ಲಾ ಜೈವಿಕ ಇಂಧನ ಘಟಕ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಪ್ರಾಮುಖ್ಯತೆ ದಿನೇ ದಿನೇ ಹೆಚ್ಚುತ್ತಿದೆ, ಇದು ನಾವೀನ್ಯತೆಯೊಂದಿಗೆ ಕೃಷಿ ಅಭಿವೃದ್ಧಿಗೆ ದಾರಿ ತೋರಬಲ್ಲದು ಎಂದು ಹೇಳಿದರು.
ಕೃಷಿ ಇಲಾಖೆ ಉಪನಿರ್ದೇಶಕರಾದ ರಾಘವೇಂದ್ರ ಮಾತನಾಡಿ, ನಮ್ಮ ದೇಶದ 5ನೇ ಪ್ರಧನಮಂತ್ರಿಗಳಾದ ಚೌಧರಿ ಚರಣಸಿಂಗ್ ಅವರ ಜನ್ಮದಿನದ ಸವಿ ನೆನಪಿಗಾಗಿ ಹಾಗೂ ರೈತರ ಸೇವೆಯನ್ನು ಸ್ಮರಿಸುವ ಸಲುವಾಗಿ ರೈತ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.ಎಸ್.ಬಿ.ಪಾಟೀಲ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಾಕರಾದ ಡಾ.ಸಿದ್ದನಗೌಡ ಅವರು, ಹಲ್ಲಿನ ಸುರಕ್ಷತೆ ಹಾಗೂ ಆರೋಗ್ಯದ ಕುರಿತು ತಿಳಿಸಿ ಹಲ್ಲು ಉಜ್ಜುವ ವೈಜ್ಞಾನಿಕ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ.ಸುನೀಲಕುಮಾರ.ಎನ್.ಎಮ್. ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಲ್ಲಿನ ಆರೋಗ್ಯದ ಮಹತ್ವವನ್ನು ಎಲ್ಲರಿಗೂ ತಲುಪಿಸುವ ಮತ್ತು ರೈತರ ಆರೋಗ್ಯ ಸುಧಾರಣೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಎಸ್.ಬಿ.ಪಾಟೀಲ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು.
ಈ ವೇಳೆ ರೋಟೆರಿಯನ್ ಶಿವಕುಮಾರ ಪಾಖಲ್, ವಿಜ್ಞಾನಿಗಳಾದ ಡಾ.ನಿಂಗದಳ್ಳಿ ಮಲ್ಲಿಕಾರ್ಜುನ, ಡಾ.ಜ್ಞಾನದೇವ ಬುಳ್ಳಾ, ಎಮ್.ಎ.ಕೆ ಅನ್ಸಾರಿ ಮತ್ತಿತರರು ಇದ್ದರು.