ರೈತರು ಸಾಲಮನ್ನಾ ಕೇಳದೆ, ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು: ರೋಣ ಶಾಸಕ ಜಿ.ಎಸ್. ಪಾಟೀಲ

| Published : Dec 24 2024, 12:50 AM IST / Updated: Dec 24 2024, 08:29 AM IST

ರೈತರು ಸಾಲಮನ್ನಾ ಕೇಳದೆ, ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು: ರೋಣ ಶಾಸಕ ಜಿ.ಎಸ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಗದಗ ಜಿಲ್ಲಾ ಅನ್ನದಾತರ ಸಮಾವೇಶ ಹಾಗೂ ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತ ಅನಾವರಣ ಕಾರ್ಯಕ್ರಮ ನಡೆಯಿತು.

ಮುಂಡರಗಿ: ರೈತರು ಸಾಲಮನ್ನಾ ಕೇಳದೇ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು. ರೈತರಿಗೆ ತೊಂದರೆಯಾದಲ್ಲಿ ಎಲ್ಲರೂ ಹೋರಾಟ ಮಾಡೋಣ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಜರುಗಿದ ಗದಗ ಜಿಲ್ಲಾ ಅನ್ನದಾತರ ಸಮಾವೇಶ ಹಾಗೂ ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತ ಇದ್ದರೆ ಮಾತ್ರ ಎಲ್ಲರೂ ಬದುಕುವುದು. ನಮ್ಮ ಸರ್ಕಾರಗಳು ರೈತರಿಗಾಗಿ‌ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯಾದ್ಯಂತ ಪ್ರತಿ ಗ್ರಾಮದಲ್ಲಿಯೂ ಮನೆಗೊಬ್ಬರಂತೆ ರೈತ ಸಂಘದ ಸದಸ್ಯರಾಗಬೇಕು. ಮುಂದೆ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳಲು ಬೆಂಗಳೂರು, ದಿಲ್ಲಿಗೆ ಹೋಗಿ ಪ್ರತಿಭಟನೆ ಮಾಡುವ ಅವಶ್ಯವಿಲ್ಲ. ಅವರೆಲ್ಲರೂ ಸೇರಿ ಅವರ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿಯೇ ಹೋರಾಟ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಲು ಅನುಕೂಲವಾಗುತ್ತದೆ. ಮುಂಬರುವ ವಿಧಾನಸಭ ಚುನಾವಣೆಯಲ್ಲಿ ರಾಜ್ಯದ 100 ಕ್ಷೇತ್ರಗಳಲ್ಲಿ ರೈತ ಸಂಘದ ಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ನಬಾರ್ಡ್‌ನಲ್ಲಿ ರೈತರಿಗೆ ವಿತರಿಸುವ ಸಾಲದ ಮೊತ್ತ ಕಡಿತಗೊಳಿಸಿರುವುದು ಹಾಗೂ ಮೈಕ್ರೋಫೈನಾನ್ಸ್ ವಿಷಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜ. 29ರಂದು ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚಿನ ರೈತರು ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯನವರ ಮಾತನಾಡಿ, ನಂಜುಂಡಸ್ವಾಮಿ, ಪುಟ್ಟಣ್ಣಯ್ಯ ಅವರಂಥ ಅನೇಕರು ರೈತ ಕುಲಕ್ಕಾಗಿ ಹೋರಾಟ ನಡೆಸಿ, ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಆದರೆ ಈಗ ಕಳ್ಳರು, ಅಕ್ರಮ ಮರಳು ದಂದೆಕೋರರು ಹಸಿರು ವಸ್ತ್ರ ಹಾಕಿಕೊಂಡು ಅದರ ಗೌರವ ಕಳೆಯುತ್ತಿದ್ದು, ಅದು ರೈತ ಕುಲಕ್ಕೆ ಮಾಡುವ ದ್ರೋಹವಾಗಿದೆ. ಅದು ತಕ್ಷಣವೇ ನಿಲ್ಲಬೇಕು ಎಂದರು.

ರಾಜಿಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟಿಲ ಮಾತನಾಡಿ, ಪ್ರಚಲಿತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ನಿರ್ಲಕ್ಷಿಸುತ್ತಾ ಬಂದಿದ್ದು, ರೈತರ ಸಮಸ್ಯೆ ಬಗೆಹರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಯಾವುದನ್ನೂ ಪರಿಹಾರ ಸಿಕ್ಕಿಲ್ಲ. ರೈತರಿಗೆ ಇನ್ನಷ್ಟು ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರೈತಸಂಘದ ರಾಜ್ಯ ಸಮಿತಿ ಸದಸ್ಯ ಚಂದ್ರಕಾಂತ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಇಟಗಿ, ರಾಮಣ್ಣ ಇಲ್ಲೂರ, ಮಹೇಶ ಪ್ರಭು, ಶೋಭಾ ಮೇಟಿ, ಡಿ.ಡಿ. ಮೋರನಾಳ, ಎನ್.ಡಿ. ವಸಂತಕುಮಾರ, ಎ.ಎಂ. ಮಹೇಶಪ್ರಭು, ಎ.ಎಲ್. ಕೆಂಪೇಗೌಡ, ಶಾರದಾ ಹಿರೇಮಠ, ಎಂ.ಎಲ್. ನಾಯ್ಡು, ನೇತ್ರಾವತಿ, ಮಂಜುಳಾ ಅಕ್ಕಿ, ವಿ. ಬಾಲಕೃಷ್ಣ, ಕೆಂಪಮ್ಮ, ಮುತ್ತನಗೌಡ ಚೌಡ್ರರಡ್ಡಿ, ಛಾಯಾ ಜ್ಯೋಶಿ, ಚಂದ್ರಪ್ಪ ಗದ್ದಿ, ಶರಣಪ್ಪ ಚೆನ್ನಳ್ಳಿ, ರಾಘವೇಂದ್ರ ಕುರಿ, ಹುಚ್ಚಪ್ಪ ಹಂದ್ರಾಳ, ಅಶೋಕ ಬನ್ನಿಕೊಪ್ಪ, ಭೀಮೇಶ ಬಂಡಿವಡ್ಡರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಲೂಕಿನ ನೂರಾರು ಪುರುಷ ಹಾಗೂ ಮಹಿಳಾ ರೈತರನ್ನು ಗೌರವಿಸಲಾಯಿತು. ಶಿವಾನಂದ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಗೌಡರ್ ಕಾರ್ಯಕ್ರಮ ನಿರೂಪಿಸಿದರು. ಹುಸೇನಸಾಬ್ ಕುರಿ ವಂದಿಸಿದರು.