ಸಾರಾಂಶ
ರೈತರು ವಿಷಮುಕ್ತ ಆಹಾರ ಮತ್ತು ರಾಸಾಯನಿಕ ಮುಕ್ತ ಕೃಷಿ ಇಂದಿನ ಅಗತ್ಯವಾಗಿದೆ. ರೈತರು ಆಧುನಿಕತೆ ಅಳವಡಿಸಿಕೊಳ್ಳಬೇಕು. ರೈತರ ಬೆಳೆಗಳಿಗೆ ಉತ್ತಮ ಬೆಲೆ ನೀಡುವ ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಗ್ರೇಡ್ -2 ತಹಸೀಲ್ದಾರ್ ಮಂಜುನಾಥ ಅಮಾಸಿ ಹೇಳಿದರು.
ಲಕ್ಷ್ಮೇಶ್ವರ: ರೈತರು ವಿಷಮುಕ್ತ ಕೃಷಿಯತ್ತ ಒಲವು ತೋರುವುದು ಹಾಗೂ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಬೆಳೆಸುವುದು ಅಗತ್ಯವಾಗಿದೆ ಎಂದು ಗ್ರೇಡ್ -2 ತಹಸೀಲ್ದಾರ್ ಮಂಜುನಾಥ ಅಮಾಸಿ ಹೇಳಿದರು.
ಪಟ್ಟಣದ ಸಾಯಿ ಬಾಬಾ ದೇವಾಲಯದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ವಿಷಮುಕ್ತ ಆಹಾರ ಮತ್ತು ರಾಸಾಯನಿಕ ಮುಕ್ತ ಕೃಷಿ ಮಾಡುವುದು ಇಂದಿನ ಅಗತ್ಯವಾಗಿದೆ. ಕೃಷಿಯಲ್ಲಿ ರೈತರು ಆಧುನಿಕತೆ ಅಳವಡಿಸಿಕೊಳ್ಳಬೇಕು. ಅದರಿಂದ ಹೆಚ್ಚು ಇಳುವರಿ ಪಡೆಯುವ ಜತೆಗೆ ಲಾಭ ಗಳಿಸಲು ಸಾಧ್ಯವಾಗುತ್ತದೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ನೀಡುವ ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ರೈತರು ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಕೃಷಿಯಲ್ಲಿ ಹೊಸತನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ಮಾತನಾಡಿ, ರೈತರು ಬಿತ್ತನೆ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಬೀಜೋಪಚಾರ ಮಾಡಬೇಕು. ಅದರಿಂದ ರೋಗಗಳಿಂದ ಬೆಳೆಗಳನ್ನು ಕಾಪಾಡುವ ಸಾಧ್ಯವಿದೆ. ರೈತರು ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ರೈತರಿಗೆ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.ಈ ವೇಳೆ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಪ್ರಗತಿಪರ ರೈತ ಚನ್ನಪ್ಪ ಷಣ್ಮುಖಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಬ್ಯಾಡಗಿ ಕಾರ್ಯಕ್ರಮ ನಿರ್ವಹಿಸಿದರು.
ಈ ವೇಳೆ ರೈತ ಸಂಘದ ಟಾಕಪ್ಪ ಸಾತಪುತೆ, ಶಿವಾನಂದ ಲಿಂಗಶೆಟ್ಟಿ, ಅಮರಪ್ಪ ಗುಡಗುಂಟಿ, ಮಂಜುನಾಥ ಇದ್ದರು.