ಬೇಡಿಕೆ ಈಡೇರಿಕೆಗೆ ರೈತರು ಧ್ವನಿ ಎತ್ತಲಿ: ಕುರುಬೂರು ಶಾಂತಕುಮಾರ

| Published : Oct 28 2024, 12:57 AM IST

ಬೇಡಿಕೆ ಈಡೇರಿಕೆಗೆ ರೈತರು ಧ್ವನಿ ಎತ್ತಲಿ: ಕುರುಬೂರು ಶಾಂತಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಹಲವು ದಶಕಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಅನೇಕ ಸರ್ಕಾರಗಳು ಆಡಳಿತದಲ್ಲಿ ಬಂದೂ ಹೋದರೂ ಇನ್ನೂವರೆಗೂ ರೈತರ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲ.

ಹಳಿಯಾಳ: ದೇಶ ಸ್ವಾತಂತ್ರ್ಯ ಸಿಕ್ಕು 77 ವರ್ಷಗಳಾದರೂ ರೈತರಿಗೆ ನ್ಯಾಯ ಸಿಗುತ್ತಿಲ್ಲ. ಇದಕ್ಕೆಲ್ಲ ನಾವು ಚುನಾಯಿಸುವ ಜನಪ್ರತಿನಿಧಿಗಳೇ ಕಾರಣ. ಜನಪ್ರತಿನಿಧಿಗಳು ನಿಮ್ಮ ಬೇಡಿಕೆಗಳ ಪರವಾಗಿ ಧ್ವನಿಯೆತ್ತದಿದ್ದರೆ ಅವರನ್ನು ಪ್ರಶ್ನಿಸಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ತಿಳಿಸಿದರು.ಭಾನುವಾರ ಪಟ್ಟಣದ ಮರಾಠ ಭವನದಲ್ಲಿ ಆಯೋಜಿಸಿದ್ದ ಉತ್ತರಕನ್ನಡ ಮತ್ತು ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಬೃಹತ್ ಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣೆ ಸಮಯದಲ್ಲಿ ಮತದಾರರಿಗೆ ಹಲವಾರು ಆಶ್ವಾಸನೆ ನೀಡುವ ರಾಜಕೀಯ ಪಕ್ಷಗಳು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ ಎಂದು ಚಕಾರ ಎತ್ತುತ್ತಿಲ್ಲ ಎಂದರು.

ಕಬ್ಬಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಹಲವು ದಶಕಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಅನೇಕ ಸರ್ಕಾರಗಳು ಆಡಳಿತದಲ್ಲಿ ಬಂದೂ ಹೋದರೂ ಇನ್ನೂವರೆಗೂ ರೈತರ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲ. ರಾಜ್ಯದಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸಿ ರೈತರನ್ನು ವಂಚಿಸುತ್ತಿದ್ದರೂ ಸರ್ಕಾರ ಮಾತ್ರ ಸಕ್ಕರೆ ಕಾರ್ಖಾನೆಯ ಮಾಲೀಕರನ್ನು, ಆಡಳಿತ ಮಂಡಳಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗುತ್ತಿದೆ ಎಂದು ಆರೋಪಿಸಿದರು.ದರ ನಿಗದಿ ಮಾಡಿ: ಕೇಂದ್ರ ಸರ್ಕಾರ ಎಫ್ಆರ್‌ಪಿ ದರ ಪ್ರಕಟಿಸಿದೆ. ಆದರೆ ಈ ದರ ನಮಗೆ ಸಾಕಾಗುತ್ತಿಲ್ಲ. ಕಬ್ಬು ಬೇಸಾಯದ ಖರ್ಚು ವೆಚ್ಚ ಹೆಚ್ಚಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟು ಕೊಂಡು ಕಬ್ಬಿಗೆ ಉತ್ತಮ ಯೋಗ್ಯವಾದ ದರವನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.

ಹೊಸದಾಗಿ ಕಬ್ಬು ನಾಟಿ ಮಾಡುವ ರೈತರಿಗೆ ಪ್ರತಿ ಎಕರೆಗೆ ₹8000 ಪ್ರೋತ್ಸಾಹಧನ ನೀಡುವುದಾಗಿ ಹೇಳುತ್ತಿದ್ದಾರೆ. ಅದಕ್ಕಾಗಿ ಕಬ್ಬು ಬೆಳೆಗಾರರು ಆತಂಕಪಡುವ ಅವಶ್ಯಕತೆಯೇ ಇಲ್ಲ. ಕಾರ್ಖಾನೆಯವರು ಹಿಂದಿನ ಬಾಕಿ ಪಾವತಿಸುವರೆಗೆ ಕಬ್ಬನ್ನು ನೀಡಲು ಮುಂದಾಗಬೇಡಿ ಎಂದು ಮನವಿ ಮಾಡಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆ, ಧಾರವಾಡ ಜಿಲ್ಲಾಧ್ಯಕ್ಷ ಮಹೇಶ ಬೆಳಗಾಂವಕರ, ರಾಜ್ಯ ಕಾರ್ಯದರ್ಶಿ ನಿಜಗುಣ ಕೆಲಗೇರಿ, ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಚೂನಪ್ಪಾ ಪೂಜಾರ ಮಾತನಾಡಿದರು.

ಮಾಜಿ ಶಾಸಕ ಸುನೀಲ ಹೆಗಡೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಪ್ರಮುಖರಾದ ಶಂಕರ ಕಾಜಗಾರ, ಎಂ.ವಿ. ಘಾಡಿ, ಅಶೋಕ ಮೇಟಿ, ನಾಗೇಂದ್ರ ಜಿವೋಜಿ, ಸುರೇಶ ಶಿವಣ್ಣನವರ, ಧಾರವಾಡ ಜಿಲ್ಲಾ ಪ್ರಮುಖರಾದ ಉಳುವಪ್ಪ ಬಳಿಗೇರ, ವಾಸು ಡಾಕಪ್ಪನವರ, ಬಸಣ್ಣಗೌಡ ಸಿದ್ದನಗೌಡ ಇತರರು ಇದ್ದರು.