ಸಾರಾಂಶ
ಅನಧಿಕೃತವಾಗಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಅಪರಾಧ. ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲು ಮತ್ತು ಸದರಿ ಕಾಯ್ದೆಯನ್ವಯ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ : ಅನಧಿಕೃತವಾಗಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಅಪರಾಧ. ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ 1994 ನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಳಿಸಲು ಮತ್ತು ಸದರಿ ಕಾಯ್ದೆ ಉಲ್ಲಂಘಿಸಿರುವ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲು ಮತ್ತು ಸದರಿ ಕಾಯ್ದೆಯನ್ವಯ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಿಸಿ, ಪಿಎನ್‌ಡಿಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸಕ್ಷಮ ಪ್ರಾಧಿಕಾರದ ಅಧಿಕಾರಿ ಮತ್ತು ತಂಡದವರು ಕಳೆದ ಡಿ.26 ಮತ್ತು 27 ರಂದು ಜಿಲ್ಲೆಯಲ್ಲಿನ ಆಸ್ಪತ್ರೆ, ಸ್ಕ್ಯಾನಿಂಗ್ ಕೇಂದ್ರಗಳಿಗೆ ಅನೀರಿಕ್ಷಿತವಾಗಿ ಭೇಟಿ ನೀಡಿದಾಗ ಪಿಸಿ, ಪಿಎನ್‌ಡಿಟಿ ಕಾಯ್ದೆಯ ಉಲ್ಲಂಘನೆ ಮಾಡಿರುವ 1) ದೇಸಾಯಿ ಆಸ್ಪತ್ರೆ, ಇಂಡಿ 2) ಗಜಾಕೋಶ ಆಸ್ಪತ್ರೆ, ಇಂಡಿ ಹಾಗೂ 3) ಆದಿತ್ಯ ಮೆಟರನಿಟಿ ಮತ್ತು ಜನರಲ್ ಆಸ್ಪತ್ರೆ, ವಿಜಯಪುರ ಇಲ್ಲಿನ ಸ್ಕ್ಯಾನಿಗ್ ಯಂತ್ರಗಳನ್ನು ಸೀಜ್ ಮಾಡಿ ಆಸ್ಪತ್ರೆ, ಸ್ಕ್ಯಾನಿಂಗ್ ಕೇಂದ್ರದ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಸದರಿ ಆಸ್ಪತ್ರೆಗಳ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕು ಎಂದು ಸೂಚಿಸಿದರು. ಚಡಚಣದಲ್ಲಿರುವ ಸ್ಕ್ಯಾನಿಂಗ್ ಕೇಂದ್ರ, ಆಸ್ಪತ್ರೆಯಲ್ಲಿ ಫಾರಂ-ಎಫ್‌ನಲ್ಲಿ ರೋಗಿಗಳು ಮಾಡಿರುವ ಸಹಿಗಳ ನೈಜತೆಯ ಬಗ್ಗೆ ಫಾರೆನ್ಸಿಕ್ ತಜ್ಞರಿಂದ ಪರಿಶೀಲಿಸಿ ವರದಿ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳಿಗೆ ತಿಳಿಸಿದರು.
ಪಿಸಿ, ಪಿಎನ್‌ಡಿಟಿ ಕಾಯ್ದೆಯ ಕುರಿತು ಜಿಲ್ಲೆಯಾದ್ಯಂತೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಕಾಯ್ದೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಕಾಯ್ದೆಯ ನಿಯಮಗಳ ಕುರಿತು ಕರಪತ್ರಗಳನ್ನು ಮುದ್ರಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ ಒಳಗೊಂಡಂತೆ ವಿವಿಧ ಸ್ಥಳಗಳಲ್ಲಿ ಪ್ರಚುರಪಡಿಸುವ ಮೂಲಕ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಲಿಂಗಾನುಪಾತದ ಸಮಾನತೆ ಕಾಪಾಡಲು ಜಾಗೃತಿ ಅಭಿಯಾನ ಕೈಗೊಳ್ಳಬೇಕು, ರೇಡಿಯೋ ಜಿಂಗಲ್ಸ್ ಮೂಲಕ ಪ್ರಚುರಪಡಿಸಬೇಕು, ಸಾರ್ವಜನಿಕ ಪ್ರದೇಶಗಳಲ್ಲಿ ವಿಡಿಯೋ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸುವಂತೆ ಅವರು ತಿಳಿಸಿದರು. ಸಭೆಯಲ್ಲಿ ಜಿಪಂ ಸಿಇಒ ರಿಷಿ ಆನಂದ, ಎಸಿ ಗುರುನಾಥ ದಡ್ಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಪಿಸಿ,ಪಿಎನ್‌ಡಿಟಿ ಸಲಹಾ ಸಮಿತಿ ಸದಸ್ಯರಾದ ಡಾ.ಟಿ.ಪಿ.ನಾಯ್ಡು, ಡಾ.ಶೈಲಜಾ ಬಿದರಿ, ಪೀಟರ್ ಅಲೆಕ್ಸಾಂಡರ್, ಶರತ್ ರೂಡಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಬಾಕ್ಸ್
ಈ ಆಸ್ಪತ್ರೆಗಳ ವಿರುದ್ಧ ಕ್ರಮ
ಜಿಲ್ಲೆಯ ೪ ಸ್ಕ್ಯಾನಿಂಗ್ ಕೇಂದ್ರ ಆಸ್ಪತ್ರೆಗಳಾದ 1) ಶಿವಾ ಕ್ಲಿನಿಕ್, ಚಡಚಣ 2) ಮಿರಜಕರ ಆಸ್ಪತ್ರೆ, ಚಡಚಣ 3) ಶ್ರೀ ಸಾಯಿ ಆಸ್ಪತ್ರೆ, ತಾಳೀಕೋಟಿ ಮತ್ತು 4) ಪ್ರೇಮಾ ಸ್ಕ್ಯಾನ್ ಸೆಂಟರ್, ವಿಜಯಪುರ ಕೇಂದ್ರಗಳಿಗೆ ನೋಟಿಸ್ ನೀಡಲಾಗಿದ್ದು, ಸದರಿ ನೋಟಿಸ್‌ಗೆ ಅವರಿಂದ ಸಲ್ಲಿಕೆಯಾಗಿರುವ ವಿವರಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಕಾಯ್ದೆ ಉಲ್ಲಂಘನೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಪಿಸಿ, ಪಿಎನ್‌ಡಿಟಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲು ಕ್ರಮವನ್ನು ಜರುಗಿಸಬೇಕು ಎಂದು ಸೂಚಿಸಿದರು.