ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ರಸಕ್ತ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಬಹಳಷ್ಟು ದೇಶಗಳಲ್ಲಿ ಮಾನವ ಹಕ್ಕುಗಳಿಗೆ ಚ್ಯುತಿ ಬರುವುದನ್ನು ನೋಡುತ್ತಿದ್ದೇವೆ. ಧರ್ಮಧರ್ಮಗಳ ಬಡಿದಾಟ, ವೈಮನಸ್ಸುಗಳ ಸ್ಥಿತಿ ಉದ್ಭವ ಆಗುತ್ತಿದ್ದು, ಇದು ನಿಲ್ಲಬೇಕಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಾನಂ ಲೋಕೇಶ್ ತಿಳಿಸಿದರು.ನಗರದ ಸಂಗಮೇಶ್ವರ ಬಡಾವಣೆ, ಜವೇನಹಳ್ಳಿ ಕೆರೆ ಬಳಿ ಇರುವ ಹಿರಿಯ ನಾಗರಿಕರ ಸಭಾಂಗಣದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಮಿತಿಯ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಜೀವನ ಮಾಡುವುದಕ್ಕೆ ಪ್ರಮುಖವಾದುದ್ದು ವ್ಯಕ್ತಿಯ ಹಕ್ಕು ಮತ್ತು ಕರ್ತವ್ಯಗಳು. ಪ್ರಪಂಚದಲ್ಲಿ ಬುದ್ಧಿಜೀವಿಗಳು ಎನಿಸಿಕೊಂಡಿರುವವರು ಮಾನವರೇ. ಆದರೇ ಅವರ ಹಕ್ಕುಗಳ ಉಳಿಸಿಕೊಳ್ಳಲು ಕೂಡ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಆಲೋಚನೆ ಮಾಡಬೇಕಾಗಿದೆ. ಮಾನವನ ಸ್ಥಿತಿ ಎಲ್ಲಿಗೆ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ೧೯೪೮ನೇ ಸಾಲಿನಲ್ಲಿ ಇದೊಂದು ಮಾನವ ಹಕ್ಕಗಳ ಆಯೋಗ ಸ್ಥಾಪನೆ ಆದ ನಂತರ ಹಲವಾರು ಸಂಘಸಂಸ್ಥೆಗಳು ಮಾನವ ಹಕ್ಕುಗಳ ವಿಚಾರವಾಗಿ ಮಾನವನಿಗಿರುವ ಹಕ್ಕುಗಳಿಗಾಗಿ ಹುಟ್ಟಿಕೊಂಡಿದೆ. ಹಾಸನದಲ್ಲೂ ಕೂಡ ಮಾನವ ಹಕ್ಕುಗಳ ಜನಸೇವಾ ಸಮಿತಿ ಜನ್ಮತಾಳಿದೆ. ಏನಾದರೂ ಸಮಸ್ಯೆ ಇದ್ದರೆ ನಮ್ಮ ಸಂಸ್ಥೆಗಳ ಪದಾಧಿಕಾರಿಗಳಿಗೆ ತಿಳಿಸಿದರೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು.
ಲಿಂಗತಾರತಮ್ಯ ಬರಬಾರದು. ಮಾನವರೆಲ್ಲರೂ ಒಂದೇ, ಅದೇ ಮಾನವ ಧರ್ಮ ಎಂದು ಕಿವಿಮಾತು ಹೇಳಿದರು. ಯಾರು ಮಾನವ ಧರ್ಮ ಪಾಲನೆ ಮಾಡುತ್ತಾರೆ, ಯಾರು ಮಾನವೀಯ ಗುಣಗಳನ್ನು ಮತ್ತು ಮೌಲ್ಯಗಳನ್ನು ಬೆಳೆಸಿಕೊಂಡಿರುತ್ತಾರೆ ಅವರೆಲ್ಲರೂ ಕೂಡ ನಿಜ ಮಾನವರು ಎಂದರು.ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘಟನೆ ರಾಜ್ಯಾಧ್ಯಕ್ಷೆ ಸಿ.ಎಂ. ನಾಗರತ್ನ ಮಾತನಾಡಿ, ಇವತ್ತು ಭ್ರಷ್ಟಾಚಾರ ಮಿತಿಮೀರಿದೆ. ಇನ್ನು ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲ. ಯಾವಾಗ ನಡುರಾತ್ರಿಯಲ್ಲಿ ಹೆಣ್ಣು ಮಗಳು ಓಡಾಡುತ್ತಾಳೋ ಅವತ್ತು ದೇಶಕ್ಕೆ ಸ್ವಾತಂತ್ರ್ಯ. ನಮ್ಮನ್ನೆಲ್ಲಾ ಕಾಯುತ್ತಿರುವುದು ಆರಕ್ಷಕರು. ಕೆಲ ದಿನಗಳ ಹಿಂದೆ ಹೆಣ್ಣುಮಗಳು ಪೊಲೀಸ್ ಠಾಣೆಗೆ ದೂರು ಕೊಡಲು ಬಂದರೇ ಅತ್ಯಚಾರದ ಪ್ರಕರಣ ನಡೆದಿದೆ. ರಕ್ಷಣೆ ಕೊಡುವವರೇ ಭಕ್ಷಕರಾದರೇ ಹೇಗೆ ನಮ್ಮ ದೇಶ ಉದ್ಧಾರವಾಗುತ್ತದೆ ಎಂದು ತುಮಕೂರಿನಲ್ಲಿ ಪೊಲೀಸ್ ಅಧಿಕಾರಿಯಿಂದ ನಡೆದ ದೌರ್ಜನ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕ ಮಕ್ಕಳ ಮೇಲೆ ಉಪಾಧ್ಯಯರೇ ಅತ್ಯಾಚಾರ ಮಾಡುತ್ತಾರೆ. ಅಕ್ಕಪಕ್ಕದ ಮನೆಯವರು ಚಿಕ್ಕ ಮಕ್ಕಳ ಮೇಲೆ ಅತ್ಯಚಾರ ಎಸಗುತ್ತಿರುವುದು ನಮ್ಮ ದೇಶದ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಅತ್ಯಾಚಾರ ಮಾಡಿದವನ ಕಡೆಗೂ ರಾಜಕೀಯ ಸಹಕಾರ ಕೊಡುತ್ತದೆ, ಸತ್ತವನಿಗೂ ರಾಜಕೀಯ ಸಹಕಾರ ಕೊಡುತ್ತದೆ. ಎಲ್ಲಿ ಅತ್ಯಾಚಾರಿಯನ್ನು ಕಂಡಲ್ಲಿ ಗುಂಡು ಎಂದು ಕಾನೂನು ತರುವವರಿಗೂ ಈ ಭ್ರಷ್ಟಾಚಾರ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ನಿಲ್ಲುವುದಿಲ್ಲ ಎಂದರು. ದೇಶ ಕಾಯುವ ಸೈನಿಕ ಎಷ್ಟು ಮುಖ್ಯವೋ ಎಲ್ಲಾರ ಹೊಟ್ಟೆ ತುಂಬಿಸುವ ರೈತನು ಕೂಡ ಅಷ್ಟೆ ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಗೌರವಾಧ್ಯಕ್ಷ ಎ.ಎಸ್. ಸುರೇಶ್, ಜಿಲ್ಲಾಧ್ಯಕ್ಷ ರಘುಗೌಡ, ವಕೀಲರಾದ ಯೋಗೀಶ್, ಸಿ.ಎಸ್. ರವಿಕಿರಣ್, ಜಿಲ್ಲಾಧ್ಯಕ್ಷೆ ಎಚ್.ಎಸ್. ಪ್ರತಿಮಾ, ಇತರರು ಉಪಸ್ಥಿತರಿದ್ದರು.