ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಗಡಿ ಗ್ರಾಮಗಳಲ್ಲಿ ಹೋರಾಟದ ಮನೋಭಾವ ಹೆಚ್ಚಬೇಕು. ಆ ಮೂಲಕ ಸಂಘಟನಾತ್ಮಕ ಶಕ್ತಿಯನ್ನು ಬೆಳೆಸಿಕೊಂಡು ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ಎಚ್.ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.ತಾಲೂಕಿನ ಗಡಿಗ್ರಾಮ ಬಸಾಪುರದಲ್ಲಿ ಮಂಗಳವಾರ ನೂತನವಾಗಿ ಆರಂಭಿಸಲಾದ ದಲಿತ ಸಂಘರ್ಷ ಸಮಿತಿ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವಕರು ಗ್ರಾಮಗಳಲ್ಲಿ ತಮ್ಮ ಸಮುದಾಯದ ಅಭಿವೃದ್ಧಿ ಸೇರಿದಂತೆ ಇತರೆ ಸಮುದಾಯಗಳ ಜೊತೆ ಸೌಹಾರ್ದ ಸಂಬಂಧವನ್ನು ಇಟ್ಟುಕೊಂಡು ಸಂಘಟನೆಗಳನ್ನು ಮಾಡಬೇಕು. ಈ ರಾಜ್ಯದಲ್ಲಿ ನೊಂದವರ ಪರವಾಗಿ ಬೀದಿಗಿಳಿದು ಹೋರಾಡಿದ ಪ್ರೊ.ಬಿ.ಕೃಷ್ಣಪ್ಪ ಅವರ ಕುರಿತು ಇಂದಿನ ಯುವಕರಿಗೆ ಮಾಹಿತಿ ತಿಳಿಸುವ ಕೆಲಸ ಆಗಬೇಕಿದೆ. ಅಂತಹ ಹೋರಾಟಗಾರರು ಇಲ್ಲದೇ ಹೋಗಿದ್ದರೆ ಈ ರಾಜ್ಯದ ಶೋಷಿತರ ಪರಿಸ್ಥಿತಿ ಹೇಗೆ ಇರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು.ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಟಿ.ವಿಜಯಕುಮಾರ್ ಮಾತನಾಡಿ, ಕಳೆದ ಮೂರು ದಶಕಗಳಿಂದಲೂ ದಲಿತ ಚಳವಳಿಯಲ್ಲಿ ಹೋರಾಟ ಮಾಡಿಕೊಂಡು ಬಂದವರು ಇಂದಿಗೂ ಗ್ರಾಮ ಶಾಖೆಗಳನ್ನು ಮಾಡುತ್ತಿದ್ದೇವೆ. ಆರಂಭದ ಕಾಲಘಟ್ಟದಲ್ಲಿ ಚಳವಳಿ ಉತ್ತುಂಗದಲ್ಲಿತ್ತು. ಇಂತಹ ಸಂದರ್ಭದಲ್ಲಿ ಬೀದಿಗಿಳಿದು ಹೋರಾಡಲು ನಮಗೆ ಕಲಿಸಿದ್ದೇ ಪ್ರೊ.ಬಿ.ಕೃಷ್ಣಪ್ಪ. ತಾಯ್ತನದ ಪ್ರೀತಿ ಕೃಷ್ಣಪ್ಪರಲ್ಲಿ ಇತ್ತು. ಅವರ ದಾರಿಯಲ್ಲಿ ಸಾಗಿದ ನಾವು ಇಂದಿಗೂ ಸಮುದಾಯದ ನೊಂದವರ ಪರ ಧ್ವನಿ ಎತ್ತುವ ಕಾಯಕದಲ್ಲಿ ಇದ್ದೇವೆ ಎಂದರು.
ಸಾಹಿತಿ ಮೋದೂರು ತೇಜ ಮಾತನಾಡಿ, ದಲಿತ ಚಳುವಳಿ ಈ ರಾಜ್ಯದಲ್ಲಿ ಹುಟ್ಟದೇ ಹೋಗಿದ್ದರೆ ನಾವೆಲ್ಲಾ ಹೀಗೆ ವೇದಿಕೆಗಳಲ್ಲಿ ನಿಂತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಎಪ್ಪತ್ತರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕುವ ಮೂಲಕ ಅಂಬೇಡ್ಕರ್ ಅವರನ್ನು ಅವರ ಸಿದ್ಧಾಂತವನ್ನು ನಮಗೆ ಪರಿಚಯಿಸಿದ್ದು ದಲಿತ ಚಳವಳಿ. ಪ್ರತಿಯೊಬ್ಬರೂ ಅಂಬೇಡ್ಕರ್ ವಿಚಾರಧಾರೆಗಳನ್ನು ಓದಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಶಿಕ್ಷಣ ಪಡೆದು ಸಮಾಜದ ಪರಿವರ್ತನೆಗೆ ಮುಂದಾಗಬೇಕು ಎಂದರು.
ಕವಿ ಆನಂದಕುಮಾರ್ ಮಾತನಾಡಿ, ಗ್ರಾಮೀಣ ಹಿನ್ನೆಲೆಯಲ್ಲಿ ಹುಟ್ಟಿಬಂದ ನಾವೆಲ್ಲರೂ ಸಾಮಾಜಿಕ ಅಸಮಾನತೆಯ ಕಾರಣಕ್ಕೆ ಸಾಕಷ್ಟು ನೊಂದಿದ್ದೇವೆ. ಅಂಬೇಡ್ಕರ್ ಕೊಟ್ಟ ಅವಕಾಶಗಳು ಪ್ರೊ.ಕೃಷ್ಣಪ್ಪರ ಶಿಕ್ಷಣ, ಸಂಘಟನೆ, ಹೋರಾಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚೆನ್ನಗಾನಹಳ್ಳಿ ಮಲ್ಲೇಶ್, ಪರಶುರಾಮ, ರವಿ ಬ್ಯಾಲಾಳು, ಬೂದಿಹಳ್ಳಿ ಹೊನ್ನೂರಸ್ವಾಮಿ, ಬಸಾಪುರ ಮಹೇಂದ್ರ, ಹಳೇಟೌನ್ ವೆಂಕಟೇಶ್, ದೊಡ್ಡ ಉಳ್ಳಾರ್ತಿ ರಾಜಣ್ಣ, ಹಿರೇಹಳ್ಳಿ ರುದ್ರಮುನಿ, ಯಾದಲಗಟ್ಟೆ ಓಬಳೇಶ್ ಸೇರಿದಂತೆ ಗ್ರಾಮದ ಯುವಕರು, ಮಹಿಳೆಯರು ಹಾಜರಿದ್ದರು.