ಕನ್ನಡಪ್ರಭ ವಾರ್ತೆ ದಾವಣಗೆರೆ

ಜಗದ್ಗುರು ಆದಿ ಶಂಕರಾಚಾರ್ಯರು ಭಾರತೀಯ ಸನಾತನ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ. ಅವರು ರಚಿಸಿದ ಸ್ತೋತ್ರಗಳು, ಭಾಷ್ಯಗಳು ಮತ್ತು ಸೌಂದರ್ಯ ಲಹರಿಯಂತಹ ಕೃತಿಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ವಿಶ್ವವು ಸಂಕೀರ್ಣ ಪರಿಸ್ಥಿತಿಯಲ್ಲಿರುವಾಗ ಅಧ್ಯಾತ್ಮ ಮತ್ತು ಶಂಕರಾಚಾರ್ಯರ ತತ್ವಗಳು ಶಾಂತಿಯನ್ನು ನೀಡಬಲ್ಲವು. ಇಂದಿನ ಜಗತ್ತಿನಲ್ಲಿ ಮನುಷ್ಯನಿಗೆಅತ್ಯಂತಕಠಿಣವಾದ ಕೆಲಸವೆಂದರೆಅದು ''''''''ಮನಸ್ಸಿನ ನಿಯಂತ್ರಣ''''''''. ಶಂಕರಾಚಾರ್ಯರ ತತ್ವಗಳನ್ನು ಮತ್ತು ಸ್ತೋತ್ರಗಳನ್ನು ಕೇಳುವುದರಿಂದ ಮನಸ್ಸಿಗೆ ಶಾಂತಿ ಮತ್ತು ಆತ್ಮಸ್ಥೈರ್ಯ ದೊರೆಯುತ್ತದೆ ಎಂದು ಹೇಳಿದರು.

ಭಾರತ ದೇಶವು ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಬಸವಣ್ಣನವರು ಸೇರಿದಂತೆ ಅನೇಕ ಮಹಾಪುರುಷರು ತೋರಿದ ಮಾರ್ಗದಲ್ಲಿ ನಡೆಯುವುದು ಇಂದಿನ ಅಗತ್ಯವಾಗಿದೆ. ಇಂತಹ ಜಯಂತಿಗಳು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಿವೆ. ಮಹಾನ್ ಪುರುಷರ ಜಯಂತಿಗಳನ್ನು ಆಚರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಸರ್ಕಾರದ ಕ್ರಮ ಶ್ಲಾಘನೀಯವಾದುದು ಎಂದು ತಿಳಿಸಿದರು.


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಸಮಾಜದಲ್ಲಿ ಸಮಾನತೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಶಾಂತಿಯ ಸಂದೇಶ ಸಾರಿದ ಆದಿ ಶಂಕರಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತ. ಶಂಕರಾಚಾರ್ಯರು ತಮ್ಮ ಅದ್ವೈತ ವೇದಾಂತದ ಮೂಲಕ ಸಮಾಜಕ್ಕೆ ಅತ್ಯುತ್ತಮ ಮಾರ್ಗದರ್ಶನ ನೀಡಿದ್ದಾರೆ. ಸಮಾಜದಲ್ಲಿ ಸ್ತ್ರೀ-ಪುರುಷ ಸಮಾನತೆ ಹಾಗೂ ಸರ್ವರಿಗೂ ಸಮಾನ ಅವಕಾಶಗಳಿರಬೇಕು ಎಂಬುದು ಅವರ ಆಶಯವಾಗಿತ್ತು. ಜ್ಞಾನಾರ್ಜನೆ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅವರ ಗುರಿಯಾಗಿತ್ತು. ಶಂಕರಾಚಾರ್ಯರು ತೋರಿಸಿದ ದಾರಿಯಲ್ಲಿ ನಾವೆಲ್ಲರೂ ಸಾಗಿದರೆ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಅತ್ಯಂತ ಸರಳವಾಗಿ ನಿಯಮಗಳಿಗೆ ಬದ್ಧವಾಗಿ ಜಯಂತಿಯನ್ನು ಆಚರಿಸಲಾಯಿತು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ.ಅಚ್ಚುತ, ಕಾರ್ಯದರ್ಶಿ ಸೋಮನಾಥ ಕುಲಕರ್ಣಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಎಂ.ಸಿ.ಶಶಿಕಾಂತ್, ಗಿರೀಶ್ ನಾಡಿಗ್, ವಿನಾಯಕ ಜೋಶಿ, ರಮೇಶ್ ಪಾಟೀಲ್, ಅನಿಲ್ ಬಾರಂಗಲ್, ಸೋಮನಾಥ ಕುಲಕರ್ಣಿ, ಬಾಲಕೃಷ್ಣ ವೈದ್ಯ, ಸಮಾಜ ಬಾಂಧವರು ಇತರರು ಹಾಜರಿದ್ದರು.