ಕನ್ನಡಪ್ರಭ ವಾರ್ತೆ ವಿಜಯಪುರ

ಅಭಿವೃದ್ಧಿಯ ಫಲವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಸ್ವಾತಂತ್ರ‍್ಯದ ನಿಜವಾದ ಅರ್ಥ ಸಾಕಾರಗೊಳ್ಳುತ್ತದೆ. ಈ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಡಳಿತ ಭವನದ ಸಭಾಂಗಣದಲ್ಲಿ 80ನೇ ಸ್ವಾತ್ರಂತ್ರ್ಯೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿಶ್ವವಿದ್ಯಾಲಯವೆಂದರೆ ಕೇವಲ ಪದವಿ ನೀಡುವ ಸಂಸ್ಥೆಯಲ್ಲ. ವಿಶ್ವವಿದ್ಯಾಲಯವು ಜ್ಞಾನ ಸೃಷ್ಟಿಸುವ, ಹೊಸ ಚಿಂತನೆಗಳನ್ನು ಹುಟ್ಟುಹಾಕುವ, ಸಂಶೋಧನೆ ನಡೆಸುವ, ಪ್ರತಿಭೆಯನ್ನು ಬೆಳೆಸುವ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮತ್ತು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ರಾಷ್ಟ್ರ ನಿರ್ಮಾಣದ ಪ್ರಮುಖ ಕೇಂದ್ರಗಳಾಗಬೇಕು ಎಂದರು.

ಈ ವೇಳೆ ಆಂತರಿಕ ಗುಣಮಟ್ಟ ಕೋಶದ ವತಿಯಿಂದ ವಿವಿಧ ಸಾಧನೆ ಮಾಡಿದ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ವಿವಿ ಕುಲಸಚಿವ ಶಂಕರಗೌಡ ಸೋಮನಾಳ, ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಹಾಗೂ ಕ್ರೀಡಾ ನಿರ್ದೇಶಕ ಹಣಮಂತಯ್ಯ ಪೂಜಾರಿ, ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕಿ ಪ್ರೊ.ಶಾಂತಾದೇವಿ.ಟಿ, ಸಹಾಯಕ ನಿರ್ದೇಶಕಿ ಡಾ.ಶ್ವೇತಾ ಬೆಂಗಾರೆ, ಮಹಿಳಾ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು, ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕ್ಷೇಮಪಾಪಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಜ್ಯೋತಿ ಉಪಾಧ್ಯೆ ನಿರೂಪಿಸಿ, ವಂದಿಸಿದರು.