ನಾಮಧಾರಿ ನೌಕರರ ಭವನದ 2ನೇ ಅಂತಸ್ತಿನ ಕಟ್ಟಡ ಉದ್ಘಾಟಿಸಿದ ಸತೀಶ ಸೈಲ್‌ಕನ್ನಡಪ್ರಭ ವಾರ್ತೆ ಅಂಕೋಲಾ

ಸಮಾಜದ ಒಳಿತಿಗಾಗಿ ನೀಡಲಾಗುವ ಅನುದಾನವನ್ನು ಸಮರ್ಪಕ ಹಾಗೂ ಪಾರದರ್ಶಕವಾಗಿ ಸದ್ಬಳಕೆ ಮಾಡಿಕೊಂಡಾಗ, ಅನುದಾನ ನೀಡಿದ ವ್ಯಕ್ತಿಗೆ ಆತ್ಮಸಂತೋಷ ದೊರೆಯುತ್ತದೆ ಎಂದು ಶಾಸಕ ಸತೀಶ ಸೈಲ್‌ ಹೇಳಿದರು.

ಆರ್ಯ ಈಡಿಗ ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಾಮಧಾರಿ ನೌಕರರ ಭವನದ 2ನೇ ಅಂತಸ್ತಿನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿ, ಸಮಾಜದ ಅಭಿವೃದ್ಧಿಗೆ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಆರ್ಯ ಈಡಿಗ ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ಆರ್. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಮಧಾರಿ ನೌಕರರ ಭವನವು ಅನೇಕ ಸಾಮಾಜಿಕ ಚಟುವಟಿಕೆಗೆ ವೇದಿಕೆಯಾಗುತ್ತಿರುವುದು ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿಯೂ ಸಮಾಜಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ರಾಘು ಕಾಕರಮಠ ಮಾತನಾಡಿ, ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಶಿಕ್ಷಣ, ಕ್ರೀಡೆ, ಬಡವರ ನೆರವು ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಸಂಗತಿ. ಇಂತಹ ಕಾರ್ಯಗಳಿಂದ ಸಂಘದ ಮೇಲಿನ ಜನರ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ ಎಂದರು.


ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕಾಧ್ಯಕ್ಷ ಡಿ.ಜಿ. ನಾಯ್ಕ, ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಮೋಹನ ನಾಯ್ಕ ಮಾತನಾಡಿದರು.

ಈ ಸಂದರ್ಭ ಕಟ್ಟಡ ನಿರ್ಮಿಸಲು ಅನುದಾನ ನೀಡಿದ ಶಾಸಕ ಸತೀಶ ಸೈಲ್‌, ಲೇಖಕ ಕೃಷ್ಣ ನಾಯ್ಕ ಬೊಬ್ರವಾಡ, ಅನಿಲ ನಾಯ್ಕ, ಪುರಲಕ್ಕಿಬೇಣ, ಸಮಾಜದ ನಿವೃತ್ತ ನೌಕರರಿಗೆ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಂಜುನಾಥ ನಾಯ್ಕ ಪ್ರಾರ್ಥಿಸಿದರು. ಲೇಖಕ ಕೃಷ್ಣಾ ನಾಯ್ಕ ಬೊಬ್ರವಾಡ ಕಾರ್ಯಕ್ರಮ ನಿರೂಪಿಸಿದರು.