ಬಿಡುಗಡೆಯಾದ ಅನುದಾನ ಸಮರ್ಪಕ ಬಳಕೆಯಾಗಲಿ: ಡಿಸಿ ಜಾನಕಿ

| Published : Dec 06 2024, 09:01 AM IST

ಸಾರಾಂಶ

ಬಿಡುಗಡೆಯಾದ ಅನುದಾನ ನಿಗದಿತ ಅವಧಿಯಲ್ಲಿ ಖರ್ಚು ಮಾಡುವ ಮೂಲಕ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬಿಡುಗಡೆಯಾದ ಅನುದಾನ ನಿಗದಿತ ಅವಧಿಯಲ್ಲಿ ಖರ್ಚು ಮಾಡುವ ಮೂಲಕ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಅಕ್ಟೋಬರ್‌-2024ರ ಮಾಹೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಯೋಜನೆಗಳಿಗೆ ಬಿಡುಗಡೆಯಾದ ಅನುದಾನ, ಖರ್ಚು ಮತ್ತು ಬಾಕಿ ಉಳಿದ ಅನುದಾನ ಎಷ್ಟು ಸದ್ಯದ ಪರಿಸ್ಥಿತಿ ಬಗ್ಗೆ ಮುಂದಿನ ಸಭೆಯಲ್ಲಿ ಬರುವಾಗ ಮಾಹಿತಿಯೊಂದಿಗೆ ಬರಬೇಕು. ಈ ಬಗ್ಗೆ ಮುಂಚಿತವಾಗಿಯೇ ಇಲಾಖೆಯ ಜೊತೆ ಪರಾಮರ್ಶೆಮಾಡಿಕೊಂಡು ಸಭೆಗೆ ಹಾಜರಾಗುವಂತೆ ಅಧಿಕಾರಿಗಳಗೆ ಸೂಚಿಸಿದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು, ಅನುದಾನ ಬಂದಾಗ ಅದನ್ನು ಸಂಪೂರ್ಣವಾಗಿ ವಿನಿಯೋಗವಾಗಬೇಕು. ಪ್ರಗತಿಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು. ನಿಮಗೆ ನೀಡಿರುವ ಗುರಿಗೆ ಅನುಗುಣವಾಗಿ ಕೆಲಸ ಆಗಬೇಕು ಎಂದರು. ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ಮಾಡಬೇಕು ಎಂದರು. ತಾಲೂಕು ಮಟ್ಟದಲ್ಲಿ ತಿಂಗಳ ಎಸ್‌ಸಿಎಸ್ಪಿ, ಟಿಎಸ್ಪಿ ಪ್ರಗತಿ ಪರಿಶೀಲನೆಯನ್ನು 15 ತಾರೀಖಿನೊಳಗೆ ಸಭೆ ನಡೆಸಲು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಯಯಡಿ ಬರುವ ವಸತಿ ನಿಲಯಗಳ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಬೇಕು. ಮೆನು ಪ್ರಕಾರ ಮಕ್ಕಳಿಗೆ ಆಹಾರ ಪೂರೈಸಬೇಕು. ರೇಷ್ಮೆ ಇಲಾಖೆ ಪ್ರಗತಿ ಆಶಾದಾಯಕವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಷೇಶ ಘಟಕ ಯೋಜನೆಯಡಿ ನಿಗಧಿಪಡಿಸಿದ ಒಟ್ಟು 127.62 ಕೋಟಿ ರು. ಪೈಕಿ ಬಿಡುಗಡೆಯಾದ 80.91 ಕೋಟಿ ರು. ಪೈಕಿ 62.70 ಕೋಟಿ ರು. ಖರ್ಚು ಮಾಡುವ ಮೂಲಕ ಆರ್ಥಿಕ ಶೇ.77.49, ಭೌತಿಕ ಶೇ.73.41 ರಷ್ಟು ಪ್ರಗತಿ ಸಾಧಿಸಿದರೆ, ಗಿರಿಜನ ಉಪಯೋಜನೆಯಡಿ ನಿಗದಿಪಡಿಸಿದ 30.11 ಕೋಟಿ ರು. ಪೈಕಿ 16.36 ಕೋಟಿ ರು. ಬಿಡುಗಡೆಯಾಗಿದ್ದು, 12.94 ಕೋಟಿ ರು. ಖರ್ಚು ಮಾಡುವ ಮೂಲಕ ಆರ್ಥಿಕ ಶೇ.79.14 ಮತ್ತು ಭೌತಿಕ ಶೇ.73.16 ರಷ್ಟು ಪ್ರಗತಿ ಸಾಧಿಸಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಸಭೆಗೆ ತಿಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ರೂಢಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿವೇಕಾನಂದ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್, ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ರಮೇಶ ಚವ್ಹಾಣ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.