ಸಾರಾಂಶ
ಶಿವಮೊಗ್ಗ: ಪ್ರೀತಿ-ವಿಶ್ವಾಸಕ್ಕೆ ಮತ್ತೊಂದು ಹೆಸರೇ ಶ್ರೀ ಕೃಷ್ಣ. ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುವ ಗುಣವಿರುವ ಶ್ರೀ ಕೃಷ್ಣನ ವ್ಯಕ್ತಿತ್ವವನ್ನೇ ಹೊಂದಿರುವ ಗೊಲ್ಲರ ಸಮಾಜ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಆಶಿಸಿದರು.
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ(ಯಾದವ) ಸಂಘಗಳ ಸಹಯೋಗದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಷ್ಣುವಿನ ಎರಡನೇ ಅವತಾರವೇ ಶ್ರೀಕೃಷ್ಣ. ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ಬೆರೆಯುವ ಗುಣ, ವ್ಯಕ್ತಿತ್ವ ಶ್ರೀ ಕೃಷ್ಣರದ್ದು. ಈ ಗುಣ ಗೊಲ್ಲರ ಸಮುದಾಯದಲ್ಲಿ ಬೆರೆತಿದೆ. ಇವರು ಸಂಘ ಜೀವಿಗಳು. ಈ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದರು.
ಈ ಸಮುದಾಯ ಹಸು, ಎಮ್ಮೆ ಸಾಕಾಣಿಕೆ-ಹೈನುಗಾರಿಕೆ ಮೂಲಕ ಸ್ವಾಭಿಮಾನದ ಬದುಕು ನಡೆಸುತ್ತಿದ್ದು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ನಿಮ್ಮ ಸಮಾಜದವರ ಬೇಡಿಕೆಗಳಿಗೆ ಸರ್ಕಾರ ಖಂಡಿತ ಸ್ಪಂದಿಸಲಿದೆ. ಸರ್ಕಾರ ಹಾಗೂ ಸಮಾಜದ ಮಧ್ಯೆ ಕೊಂಡಿಯಾಗಿ ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ ಅವರು, ನಾವೆಲ್ಲರೂ ಶ್ರೀ ಕೃಷ್ಣರು ತೋರಿದ ಸನ್ಮಾರ್ಗದಲ್ಲಿ ನಡೆದು ನೆಮ್ಮದಿಯಿಂದ ಬದುಕು ಸಾಗಿಸೋಣ ಎಂದು ಕರೆ ನೀಡಿದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಮಾತನಾಡಿ, ಶ್ರೀ ಕೃಷ್ಣ ಭಗವಂತನ ವಂಶಸ್ಥರಾದ ನೀವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಲಿಷ್ಠರಾಗಿ ಬೆಳೆಯಬೇಕು. ಪ್ರೀತಿ ವಿಶ್ವಾಸಕ್ಕೆ ಮತ್ತೊಂದು ಹೆಸರೇ ಗೊಲ್ಲರ ಸಮಾಜ. ಜನರ ಆರ್ಥಿಕ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾದಂತೆ. ಆದ್ದರಿಂದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಜಿ.ಕೆ.ಪ್ರೇಮ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನಾವೆಲ್ಲರೂ ಶ್ರೀ ಕೃಷ್ಣನನ್ನು ಓರ್ವ ಪುರಾಣ ಪುರುಷನನ್ನಾಗಿ ನೋಡಿದ್ದೇವೆ. ಇಡೀ ವಿಶ್ವ ಕೊಂಡಾಡುವ ಶ್ರೀ ಕೃಷ್ಣನ ಜನನ, ಬಾಲ ಲೀಲೆ, ತುಂಟಾಟ, ಜೀವನ ಚರಿತ್ರೆ ಸಾಮಾನ್ಯವಾಗಿ ಎಲ್ಲರಿಗೆ ಗೊತ್ತಿದೆ. ಬಾಲ್ಯದ ನಂತರ ಶ್ರೀ ಕೃಷ್ಣರು ಶಂಕಚಕ್ರ ಗಧಾದಾರಿಯಾಗಿ ಹೊರಟು ಹೋಗುತ್ತಾರೆ. ರಾಜಕೀಯ ಧುರೀಣನಾಗಿ, ಸಂಧಾನಕಾರನಾಗುತ್ತಾರೆ. ಶ್ರೀ ಕೃಷ್ಣನಿಗೆ ಬಹು ಆಯಾಮಗಳಿವೆ. ಇಷ್ಟೊಂದು ಆಯಾಮಗಳನ್ನು ಬೇರೆಯವರಲ್ಲಿ ನಾವು ಕಾಣಲು ಸಾಧ್ಯವಿಲ್ಲದಷ್ಟು ವೈವಿಧ್ಯಮಯವಾದ ಕೃಷ್ಣನನ್ನು ನಾವು ಕಂಡಿದ್ದೇವೆ ಎಂದರು.ಶ್ರೀ ಕೃಷ್ಣನನ್ನು ಕುರಿತು ಹಾಡಿ ಹೊಗಳಿದ ಸಾಕಷ್ಟು ಸಾಹಿತ್ಯವಿದೆ. ಪಂಪ, ರನ್ನ, ಕುಮಾರವ್ಯಾಸರಾದಿಯಾಗಿ ಇವರ ಕುರಿತು ವಿಧ ವಿಧ ವರ್ಣನೆ ಇದೆ. ಕಾವ್ಯದಲ್ಲಿ ಮೆರೆಸಲಾಗಿದೆ. ಇಡೀ ಮಹಾಭಾರತ ಕಥೆ ಕೃಷ್ಣನನ್ನೇ ಆವರಿಸಿಕೊಂಡು, ಅವನಿಂದಲೇ ಮುಕ್ತಾಯವಾಗುತ್ತದೆ. ಆದರೆ, ಈಗ ನಾವು ನಿಜ ಕೃಷ್ಣನನ್ನು ಹುಡುಕಬೇಕಾಗಿದೆ. ಕೊಳಲು ಹಿಡಿದ, ದನ ಕಾಯುವ, ನಮ್ಮ ಮನೆ, ಮನ, ದನದ ಹಟ್ಟಿ, ಕೇರಿಗಳಲ್ಲಿ ಇದ್ದ ಕೃಷ್ಣನನ್ನು ಕಾಣಬೇಕಿದೆ ಎಂದು ಹೇಳಿದರು.
ಜಿಲ್ಲಾ ಗೊಲ್ಲರ(ಯಾದವ) ಸಂಘದ ಅಧ್ಯಕ್ಷ ಕೆ.ಅಂಜನಪ್ಪ, ತಾಲೂಕು ಗೊಲ್ಲರ ಸಂಘದ ಅಧ್ಯಕ್ಷ ಎಸ್.ಎಚ್.ಜಗದೀಶ್, ಡಿಸಿ ಕಚೇರಿ ತಹಶೀಲ್ದಾರ್ ಲಿಂಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಸಮಾಜದ ಮುಖಂಡರು ಇದ್ದರು.