ಸಾರಾಂಶ
ನರಗುಂದ: ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ರೈತರು ಕೃಷಿಗಾಗಿ ಮಾಡಿದ ಕೃಷಿ ಸಾಲ ಮನ್ನಾ ಮಾಡಬೇಕೆಂದು ಮಹದಾಯಿ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಭಸಪ್ಪ ಹೂಗಾರ ಆಗ್ರಹಿಸಿದರು. ಅವರು 3135ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಸಂಭವಿಸಿ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿ ಸಿಲುಕಿದೆ. ಆದ್ದರಿಂದ ರೈತ ನಾಯಕರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ವರ್ಷದ ಬಜೆಟ್‌ನಲ್ಲಿ ರೈತರು ಕೃಷಿಗಾಗಿ ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳಲ್ಲಿ ಮಾಡಿರುವ ಎಲ್ಲಾ ರೀತಿಯ ಕೃಷಿಯ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು. ಈಗಾಗಲೇ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೇ ರಾಜ್ಯದಲ್ಲಿ ನೂರಾರು ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆದ್ದರಿಂದ ರೈತರ ಆತ್ಮಹತ್ಯೆ ತಡೆಯಲು ರಾಜ್ಯ ಸರ್ಕಾರ ಫೆ. 16ರಂದು ನಡೆಯುವ ಬಜೆಟ್‌ನಲ್ಲಿ ರೈತ ಸಾಲ ಮನ್ನಾ ಘೋಷಣೆ ಮಾಡಬೇಕೆಂದು ಹೇಳಿದರು. ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಹನಮಂತ ಸರನಾಯ್ಕರ, ಸುಭಾಸ ಗಿರಿಯಣ್ಣವರ, ಅರ್ಜುನ ಮಾನೆ, ಚನ್ನಬಸಪ್ಪ ಆಯಿಟ್ಟಿ, ಶಂಕ್ರಪ್ಪ ಜಾಧವ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಶಿವಪ್ಪ ಸಾತಣ್ಣವರ, ವಾಸು ಚವಾಣ, ಯಲ್ಲಪ್ಪ ಚಲವಣ್ಣವರ, ವಿಜಯಕುಮಾರ ಹೂಗಾರ ಸೇರಿದಂತೆ ಮುಂತಾದವರು ಇದ್ದರು.