ಸಾರಾಂಶ
ಹಾವೇರಿ: ಜಿಲ್ಲೆಯ ಚೌಡಯ್ಯದಾನಪುರದಲ್ಲಿರುವ ಶಿವಶರಣ ಅಂಬಿಗರ ಚೌಡಯ್ಯನವರ ಗದ್ದುಗೆ ಐಕ್ಯಮಂಟಪವನ್ನು ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಸರ್ಕಾರವೇ ಅಭಿವೃದ್ಧಿಪಡಿಸಬೇಕು ಎಂದು ಶಿವಶರಣ ಅಂಬಿಗರ ಚೌಡಯ್ಯನವರ ಪೀಠದ ಸಂಸ್ಥಾಪಕ ಬಿ.ಜಿ. ಸುಣಗಾರ ಒತ್ತಾಯಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪದ ಅಭಿವೃದ್ಧಿಯನ್ನು ಸರ್ಕಾರ ಈವರೆಗೂ ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಅಭಿವೃದ್ಧಿ ಕಾಣುವುದು ಮರೀಚಿಕೆ ಎಂಬಂತೆ ಗೋಚರಿಸುತ್ತಿದೆ.
ಇತ್ತೀಚೆಗಷ್ಟೇ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಎಚ್.ಕೆ. ಪಾಟೀಲರು ಬಂದಾಗ ಚೌಡಯ್ಯದಾನಪುರ ಗ್ರಾಮಸ್ಥರು ಹಾಗೂ ಅಂಬಿಗರ ಚೌಡಯ್ಯನವರ ಗುರುಪೀಠದ ಸ್ವಾಮೀಜಿಗಳ ನಡುವಿನ ವೈಮನಸ್ಸು ಬೆಳಕಿಗೆ ಬಂದಿದೆ. ಇದರಿಂದ ಸಚಿವರು ಗದ್ದುಗೆ ವೀಕ್ಷಣೆ ಮಾಡದೇ ವಾಪಸ್ ಆಗಿರುವುದು ಅಭಿವೃದ್ಧಿಗೆ ಖಂಡಿತ ಹಿನ್ನಡೆಯಾಗಲಿದೆ ಎಂದರು.ಅಂಬಿಗರ ಚೌಡಯ್ಯನವರ ಐಕ್ಯಮಂಟಪದ ಅಭಿವೃದ್ಧಿಗಾಗಿ 1997ರಿಂದಲೇ ಸ್ಥಳೀಯ ಗ್ರಾಮಸ್ಥರೊಂದಿಗೆ ಸೇರಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಪ್ರತಿ ತಿಂಗಳು ಹುಣ್ಣಿಮೆ ದಿನ ಐಕ್ಯಮಂಟಪದಲ್ಲಿ ಚೌಡಯ್ಯನವರ ಆರಾಧನೆ ಮಾಡುತ್ತಾ ಬಂದಿದ್ದೇವೆ. ನಂತರ ಅಲ್ಲಿ ನಡೆದ ಕೆಲವು ಘಟನೆಗಳಿಂದ ಬೇಸತ್ತು, ನರಸೀಪುರಕ್ಕೆ ಬಂದು ಪೀಠವನ್ನು ಸ್ಥಾಪಿಸಲಾಯಿತು.2002ರ ಜ. 31ರಂದು ಶಿವಶರಣ ಅಂಬಿಗರ ಚೌಡಯ್ಯನವರ ಪೀಠ ಎಂದು 21 ಸದಸ್ಯರ ಬಲ ಹೊಂದಿದ ಮಂಡಳಿ ಕಟ್ಟಿಕೊಂಡು ನೋಂದಾಯಿಸಿ, ಪ್ರಚಾರ ಕಾರ್ಯವನ್ನು ಕೈಗೊಂಡು ಸರ್ಕಾರದ ಗಮನ ಸೆಳೆದು ಪೀಠಕ್ಕಾಗಿ ಜಾಗ ಮಂಜೂರು ಮಾಡಿಸಿಕೊಂಡು ಬಂದಿದ್ದೇವೆ. ಪೀಠಕ್ಕೆ ಶಾಂತಮುನಿ ಸ್ವಾಮಿಗಳನ್ನು ತಂದು ಪೀಠಾರೋಹಣ ಮಾಡಿಸಿ ಅಧಿಕಾರ ಹಸ್ತಾಂತರ ಮಾಡಿದ್ದೇವೆ ಎಂದರು.ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಂಘದದಲ್ಲಿ ಸದಸ್ಯರು ಆಗಿರದೇ ಇದ್ದರೂ 2012ನೇ ಇಸ್ವಿಯಲ್ಲಿ ಬಂದ ದಿ. ವಿಠ್ಠಲ ಹೆರೂರ ಎಂಬ ವ್ಯಕ್ತಿ ಅಂಬಿಗರ ಚೌಡಯ್ಯನವರ ಪೀಠವನ್ನು ಸ್ಥಾಪನೆ ಮಾಡಿದ್ದಾರೆ. ಹಾಗಾಗಿ ವಿಠ್ಠಲ ಹೆರೂರ ಅವರೇ ಸಂಸ್ಥಾಪಕರು ಎಂದು ಕೆಲವರು ಹೇಳುತ್ತಿರುವುದು ಬಹಳಷ್ಟು ನೋವುಂಟು ಮಾಡಿದೆ. ಈಗಾಗಲೇ ಪೀಠದಲ್ಲಿ ಮೂರ‍್ನಾಲ್ಕು ಭಾಗಗಳಾಗಿದ್ದು, ಸರ್ಕಾರವೇ ಖುದ್ದು ಶಿವಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪವನ್ನು ಅನುಭವ ಮಂಟಪದ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸಿದರು.ಚಂದ್ರಪ್ಪ ಹೊಂಬರಡಿ, ಹನುಮಂತಪ್ಪ ಜಾಲಗಾರ, ಮಲ್ಲಪ್ಪ ಶಿಗ್ಲಿ, ಗೂರಪ್ಪ ಕರಬಣ್ಣನವರ, ಲಕ್ಷ್ಮವ್ವ ಹೊಂಬರಡಿ, ಗಂಗಮ್ಮ ಅಂಬಿಗೇರ ಇದ್ದರು.